ನ್ಯೂಸ್

ಕರುನಾಡಿಗೆ ಬರ; 195 ತಾಲೂಕುಗಳಲ್ಲಿ ಬರ, ಸಂಪುಟ ಉಪ ಸಮಿತಿ ಶಿಫಾರಸು

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ರಾಜ್ಯದ 195 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲು ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮಂಗಳವಾರ ನಡೆದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಬರ ಪರಿಸ್ಥಿತಿ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಬಗ್ಗೆ ಚರ್ಚೆ ನಡೆಸಿದರು.

ಅಂತಿಮವಾಗಿ 196 ತಾಲೂಕುಗಳಲ್ಲಿ ಬರ ಎಂದು ಘೋಷಿಸಲು ನಿರ್ಧರಿಸಲಾಯಿತು. ಇಂದೇ ಸಿಎಂಗೆ ಶಿಫಾರಸು ಮಾಡಲಾಗುತ್ತದೆ. ಜತೆಗೆ ಇನ್ನೊಮ್ಮೆ ಹದಿನೈದು ದಿನದ ಬಳಿಕ ವಾತಾವರಣ ಗಮನಿಸಿ ಮತ್ತೆ ಸಮೀಕ್ಷೆ ನಡೆಸಿ ಈ ಪಟ್ಟಿಗೆ ಉಳಿದ ತಾಲೂಕು ಸೇರಿಸಲಾಗುತ್ತದೆ.

ಈ 195 ತಾಲೂಕುಗಳಲ್ಲಿ ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ, ಮೇವು ಸಂಗ್ರಹಣೆಗೆ ಆದ್ಯತೆ, ನರೇಗಾದಡಿ ಪ್ರಸ್ತುತ ನೂರು ದಿನ ಕೆಲಸ ನೀಡಲಾಗುತ್ತಿದೆ, 150 ದಿನಗಳು ಕೆಲಸ ಕೊಡಲು ತಕ್ಷಣವೇ ಆದೇಶ ಹೊರಡಿಸಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಮಲೆನಾಡಿನಲ್ಲಿ ಶೇ.ನಲವತ್ತಕ್ಕಿಂತ ಹೆಚ್ಚು ಮಳೆ‌ ಕೊರತೆಯಾಗಿದೆ. ಇದರ ಪರಿಣಾಮ‌ ಹೆಚ್ಚಿದೆ ಎಂದ ಅವರು ಮುಂದಿನ ಹತ್ತು ದಿನಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಹಾಗೆಯೇ ವೈಜ್ಞಾನಿಕ ಸರ್ವೆ ನಡೆಸಲು ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ಕೋರಲಾಗಿದೆ ಎಂದು ತಿಳಿಸಿದರು.