ಮಾಗಡಿ : ಕೃಷಿ ಭೂಮಿಗೆ ಕೈ ಹಾಕಿದರೆ ಕೈಕಾಲು ಮುರಿಯುತ್ತೇವೆ, ನಿಮ್ಮ ಅಧಿಕಾರದ ಕುರ್ಚಿಗಳು ಉಳಿಯುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಿನ ಮರೂರು ಹ್ಯಾಂಡ್‌ಪೋಸ್ಟ್ ಬಳಿ ರೈತರು ನಡೆಸುತ್ತಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 10 ಲಕ್ಷ ಎಕರೆ ಸಿಎನ್‌ಡಿ ಭೂಮಿ ಇದ್ದು ಇದನ್ನು ಗುರುತಿಸಿ ಪ್ರಥಮ ಹಂತದಲ್ಲಿ ಕೈಗಾರಿಕೆ ಪ್ರದೇಶ ಮಾಡಲಿ. ಅದನ್ನು ಬಿಟ್ಟು ಕೃಷಿ ಭೂಮಿಗೆ ಕೈಹಾಕಿದರೆ ಸುಮ್ಮನಿರಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಸರ್ಕಾರಗಳು ರೈತನ ಭೂಮಿ ಉಳಿಸುವ ಕೆಲಸ ಮಾಡದೆ, ಸರಳವಾಗಿ ಭೂಮಿ ತಪ್ಪಿಸುವ ಕಾನೂನು ಮಾಡಲಾಗಿದೆ. ಬೆಂಗಳೂರಿಗೆ ಹತ್ತಿರ ಇದೆ ಎಂದು ಕೈಗಾರಿಕೆ ಪ್ರದೇಶ ಮಾಡಲು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದು ಬೇಡ, ರೈತರು ಜಮೀನು ನೀಡಿದರೆ ಜೀವನ ಕಷ್ಟವಾಗುತ್ತದೆ ಎಂದರು.
ಒಗ್ಗಟ್ಟಾಗಿರಿ: ರೈತರು ಒಗ್ಗಟ್ಟಾಗಿ ಇರಬೇಕು. ಇಲ್ಲದಿದ್ದರೆ, ಅಧಿಕಾರದಲ್ಲಿರುವವರು ಪೊಲೀಸ್ ಬಲ ಬಳಸಿ ಕುತಂತ್ರ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ರೈತರಿಗೆ ಕೋಡಿಹಳ್ಳಿ ಚಂದ್ರಶೇಖರ್ ಧೈರ್ಯ ತುಂಬಿದರು.
ಚಿಕ್ಕಮುದಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ರವೀಶ್ ಮಾತನಾಡಿ, ಕೈಗಾರಿಕೆ ಪ್ರದೇಶಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ರೈತರಿಗೆ ಮಾಹಿತಿ ನೀಡಿ. ಶಾಸಕರ ಪರವಾದವರು ಕೈಗಾರಿಕೆ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಸೂಚಿಸುತ್ತಿದ್ದಾರೆ. ಅಂತಹವರ ಭೂಮಿಯಲ್ಲಿ ಜಮೀನಿನಲ್ಲಿ ಕೈಗಾರಿಕೆ ನಿರ್ಮಿಸಲು ವಿರೋಧವಿಲ್ಲ ಎಂದರು.
ತಾಪಂ ಮಾಜಿ ಅಧ್ಯಕ್ಷ ಸುರೇಶ್, ತಾಲೂಕು ರೈತಸಂಘದ ಅಧ್ಯಕ್ಷ ಗೋವಿಂದರಾಜು, ನಂಜುಂಡಯ್ಯ, ಲೋಕೇಶ್, ಸೋಮಣ್ಣ, ಪ್ರಸಾದ್, ಜಗದೀಶ್, ಮರೂರು ಶಂಕರಪ್ಪ ಸೇರಿ ನೂರಾರು ರೈತರು ಇದ್ದರು.
ಭೂಮಿ ದರೋಡೆ ಬೇಡ : ಕೈಗಾರಿಕೆ ಹೆಸರಿನಲ್ಲಿ ಭೂಮಿ ದರೋಡೆ ಬೇಡ, ಸಿಎನ್‌ಡಿ ಭೂಮಿ ಗುರುತು ಮಾಡಿ ಚರ್ಚೆಗೆ ಕರೆದರೆ ಬರುತ್ತೇವೆ. ಇದರಿಂದ ಸರ್ಕಾರ ಏನು ಮಾಡುತ್ತದೆ ಎಂಬುದು ಗೊತ್ತಿದೆ. ನಾವೂ ಪರಿಶೀಲಿಸುತ್ತೇವೆ. ಆಗ ಕೈಗಾರಿಕೆ ಮಾಡುವವರು ಅರ್ಜಿ ಹಾಕಲಿ, ಕೈಗಾರಿಕೆ ನಡೆಸಲು ಇವರಿಗೆ ಯೋಗ್ಯತೆ ಇದೆಯೇ ಎಂಬುದು ರೈತರು ಹಾಗೂ ಸರ್ಕಾರಕ್ಕೆ ಮನದಟ್ಟಾಗಬೇಕು. ಕೇಳಿದವರಿಗೆಲ್ಲ 500 ಎಕರೆ ಜಮೀನು ಬರೆದು ಕೊಡಲು ರೈತ ನೆತ್ತಿಗೆ ಎಣ್ಣೆ ಕಂಡಿಲ್ಲ ಎಂದು ತಿಳಿದುಕೊಂಡಿದ್ದಾರಾ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ಆಡಿಟ್ ರಿಪೋರ್ಟ್‌ಗೆ ಪಟ್ಟು : ಈಗಾಗಲೇ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಬೆಂಗಳೂರಿನಲ್ಲಿ 2 ಲಕ್ಷ ಎಕರೆ ಭೂ ಸ್ವಾಧೀನ ಮಾಡಿದ್ದು, ಈ ಪೈಕಿ ಶೇ.25ರಷ್ಟನ್ನಾದರೂ ಕೈಗಾರಿಕೆಗೆ ಬಳಸದೆ ರಿಯಲ್ ಎಸ್ಟೆಟ್‌ಗೆ ನೀಡಿ ಹಣ ಮಾಡಿದ್ದಾರೆ. ಇದರಿಂದ ಭೂಮಿ ಕಳೆದುಕೊಂಡ ರೈತನ ಬದುಕು ಹಾಳಾಗಿದೆ. ಈ ಭೂಮಿ ಬಗ್ಗೆ ಸರ್ಕಾರ ಆಡಿಟ್ ರಿಪೋರ್ಟ್ ನೀಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ತರಾತುರಿ ನೋಟಿಫಿಕೇಷನ್ ಕೈಬಿಡಿ : ತರಾತುರಿಯಲ್ಲಿ ನೋಟಿಫಿಕೇಷನ್ ಮಾಡುವುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಕೈಬಿಡಬೇಕು. ಈ ಭಾಗದ ಕೆರೆಗಳಿಗೆ ನೀರು ತುಂಬಿಸಿ ಹಳ್ಳಿಗಳನ್ನು ಸಮೃದ್ಧಗೊಳಿಸಿದರೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳೂ ಸಿಗುತ್ತವೆ. ಹೆಚ್ಚಿನ ಕೈಗಾರಿಕೆಗಳು ಕೃಷಿ ಮೇಲೆಯೇ ಅವಲಂಬಿಸಿವೆ. ಭೂಸ್ವಾಧೀನಕ್ಕೆ ವ್ಯರ್ಥ ಪ್ರಯತ್ನ ಬೇಡ. ರೈತರ ವಿಶ್ವಾಸ ಪಡೆದು ಕೆಲಸ ಮಾಡಲಿ. ಮಧ್ಯವರ್ತಿಗಳನ್ನು ಬಿಡುವುದು ಬೇಡ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.