ನ್ಯೂಸ್

ಕೆಪಿಟಿಸಿಎಲ್ ನೇಮಕಾತಿ ಅಕ್ರಮ: ಮತ್ತಿಬ್ಬರ ಬಂಧನ, ಆರೋಪಿಗಳ ಸಂಖ್ಯೆ 22ಕ್ಕೆ ಏರಿಕೆ..

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳ ಸಂಖ್ಯೆ 22ಕ್ಕೆ ಏರಿದೆ. ಗೋಕಾಕ ನಗರ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.

ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವ ರಕ್ಷಿ (26), ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ನಾಗಪ್ಪ ದೊಡಮನಿ (27) ಬಂಧಿತ ಆರೋಪಿಗಳು. ಇವರು ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಪಾಲ್ಗೊಂಡ ಆರೋಪ ಎದುರಿಸುತ್ತಿದ್ದಾರೆ.

ನಾಗಪ್ಪ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್‌ ಉಪಕರಣ ತೆಗೆದುಕೊಂಡು ಹೋಗಿದ್ದ ಹಾಗೂ ಯಲ್ಲಪ್ಪ ಆತನಿಗೆ ಬ್ಲೂಟೂಥ್ ಮೂಲಕ ಉತ್ತರ ಹೇಳಿದ್ದ. ಹೀಗೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.