ಬೆಂಗಳೂರು: (KPSC Preliminary Examination) ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಭಾನುವಾರ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯು ಸುಸೂತ್ರವಾಗಿ ಜರುಗಿತು.
ಕೆಪಿಎಸ್ಸಿಗೆ ಅಂಟಿಕೊಂಡಿರುವ ಕಳಂಕ ತೊಡೆದು ಹಾಕುವ ಉದ್ದೇಶದಿಂದ ಪೂರ್ವಭಾವಿ ಪರೀಕ್ಷೆಯನ್ನು ಜಿಲ್ಲಾಧಿಕಾರಿ ಮುಂದಾಳತ್ವದಲ್ಲಿ ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಾಗಿ ನಡೆಸಲಾಯಿತು.
ಬೆಂಗಳೂರಿನ ಮಲ್ಲೇಶ್ವರದ ಸರ್ಕಾರಿ ಪದವಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ಅಭ್ಯರ್ಥಿಯೊಬ್ಬರು ಶರ್ಟ್ ಧರಿಸಿದ್ದ ಕಾರಣ ಸಿಬ್ಬಂದಿ ಅವರನ್ನು ತಡೆದರು. ಹೊಸ ಅಂಗಿ ಕತ್ತರಿಸಿದರೆ ಮತ್ತೊಮ್ಮೆ ಅದನ್ನು ಬಳಸುವುದು ಕಷ್ಟವಾಗುತ್ತದೆ ಮತ್ತು ಕೊನೆ ಕ್ಷಣದಲ್ಲಿ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ, ಅಭ್ಯರ್ಥಿ ಅಂಗಿಯನ್ನು ಕಳಚಿಟ್ಟು ಬನಿಯನ್ನಲ್ಲೇ ಪರೀಕ್ಷೆ ಬರೆದರು. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಯಾವುದೇ ಗೊಂದಲ ಇಲ್ಲದೆ ನಡೆಯಿತು.
319 ಹುದ್ದೆಗಳ ಪೈಕಿ 202 ಗ್ರೂಪ್ ‘ಬಿ’ ಹಾಗೂ 117 ಗ್ರೂಪ್ ‘ಎ’ ಹುದ್ದೆಗಳಾಗಿವೆ. ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳ 345 ಪರೀಕ್ಷಾ ಉಪ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಿತು. ಮೊದಲ ಬಾರಿಗೆ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನೇಮಕ ಮಾಡಲಾಗಿತ್ತು.