ನ್ಯೂಸ್

ಕೆಪಿಎಸ್ಸಿ ಸಂದರ್ಶನ ಅನುಪಾತ ಇಳಿಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರಚಿಸಲಾಗಿದ್ದ ಪಿ.ಸಿ.ಹೋಟಾ ಸಮಿತಿಯ ಎರಡು ಪ್ರಮುಖ ಶಿಫಾರಸುಗಳ ಜಾರಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಸಂದರ್ಶನಕ್ಕೆ ಇದ್ದ 1:20 ಅನುಪಾತವನ್ನು 1:15ಕ್ಕೆ ಇಳಿಸುವುದಕ್ಕೆ ಮತ್ತು ಸಾಂವಿಧಾನಿಕ ಹುದ್ದೆಯಾಗಿರುವ ಕೆಪಿಎಸ್​ಸಿ ಅಧ್ಯಕ್ಷರ ಸ್ಥಾನಕ್ಕೆ ಮುಖ್ಯ ಮಾಹಿತಿ ಆಯುಕ್ತರ ಸ್ಥಾನಮಾನ ನೀಡಲು ಸಂಪುಟ ಒಪ್ಪಿದೆ. ಆ ಮೂಲಕ ಅಧ್ಯಕ್ಷರ ಹುದ್ದೆಯನ್ನು ರಾಜ್ಯದ ಶಿಷ್ಟಾಚಾರದಲ್ಲಿ 17ನೇ ಸ್ಥಾನಕ್ಕೆ ತರಲಾಗಿದೆ.

‘ಕೆಪಿಎಸ್​ಸಿ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಶೋಧನಾ ಸಮಿತಿ ನೇಮಕ ಮಾಡುವ ಶಿಫಾರಸನ್ನು ಸಂಪುಟ ಸಭೆ ಒಪ್ಪಿಲ್ಲ. ಈ ಅಧಿಕಾರವನ್ನು ಸರ್ಕಾರವೇ ಇಟ್ಟುಕೊಳ್ಳಲು ನಿರ್ಧರಿಸಿದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಶೋಧನಾ ಸಮಿತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಅದು ಸರ್ಕಾರದ ಅಧಿಕಾರವಾಗಿರುತ್ತದೆ ಎಂದರು.