ನ್ಯೂಸ್

ಕೆಪಿಎಸ್ಸಿ ಪರೀಕ್ಷೆ ಕಾಯುವ ಶಿಕ್ಷೆ!: ರಿಎಕ್ಸಾಮ್ ಬಗ್ಗೆ ಮೂಡದ ಸ್ಪಷ್ಟತೆ; 2 ಲಕ್ಷ ಅಭ್ಯರ್ಥಿಗಳಲ್ಲಿ ಗೊಂದಲ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪೊ›ಬೇಷನರಿ ಹುದ್ದೆಗಳ ನೇಮಕಕ್ಕೆ ನಡೆಸಬೇಕಾದ ಮರುಪರೀಕ್ಷೆ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲದ ಕಾರಣ ಸುಮಾರು ಎರಡು ಲಕ್ಷ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ.

ಆ.27ರಂದು ನಡೆದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆಯಲ್ಲಿನ ದೋಷ ಸೇರಿ ವಿವಿಧ ಕಾರಣದಿಂದ ರದ್ದುಗೊಳಿಸಿದ್ದ ರಾಜ್ಯ ಸರ್ಕಾರ, ಮತ್ತೊಮ್ಮೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು. ಮುಂದಿನ ಎರಡು ತಿಂಗಳ ಒಳಗೆ ಮತ್ತೆ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರೂ, ಈವರೆಗೂ ಆಯೋಗದಲ್ಲಿ ಸ್ಪಷ್ಟತೆ ಮೂಡಿಲ್ಲ. ಇತ್ತ ಬರೋಬ್ಬರಿ ಎರಡು ಲಕ್ಷ ಅಭ್ಯರ್ಥಿಗಳು ಮರುಪರೀಕ್ಷಾ ದಿನಾಂಕ ಎದುರು ನೋಡುತ್ತಿದ್ದು, ಆಯೋಗದ ಪ್ರಕಟಣೆಗೆ ಕಾದು ಕುಳಿತಿದ್ದಾರೆ. ಮರುಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ನಿರ್ಧಾರ ಪ್ರಕಟಿಸಿದ್ದರೂ, ಆಯೋಗದಿಂದ ಸಣ್ಣ ಸ್ಪಷ್ಟನೆಯೂ ಹೊರಬಿದ್ದಿಲ್ಲ. ಹೀಗಾಗಿ ಕೆಎಎಸ್ ಆಗುವ ಕನಸು ಹೊತ್ತು ಹಲವು ಸಮಯದಿಂದ ಶ್ರಮವಹಿಸಿರುವ ಅಭ್ಯರ್ಥಿಗಳು ನಿರಾಸೆಗೊಂಡಿದ್ದಾರೆ. ಮರುಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ನಿಗದಿಯಾದರೆ ಪರೀಕ್ಷಾ ತಯಾರಿ ಮಾಡಿಕೊಳ್ಳಬಹುದು. ಈ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲವಾದರೆ ತ್ರಿಶಂಕು ಸ್ಥಿತಿ ನಿರ್ವಣವಾದಂತೆ. ಜತೆಗೆ ಬೇರೆ ಬೇರೆ ಪರೀಕ್ಷೆ ಎದುರಿಸುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವವರೂ ಇದ್ದಾರೆ. ಅವರೂ ಸಹ ಗೊಂದಲಕ್ಕೆ ಬೀಳುವಂತಾಗಿದೆ. ಕೆಎಎಸ್ ಪರೀಕ್ಷೆಯನ್ನು ಪ್ರಮುಖ ಗುರಿಯಾಗಿ ತೆಗೆದುಕೊಳ್ಳುವ ಅಭ್ಯರ್ಥಿಗಳು ಇದೀಗ ಮರುಪರೀಕ್ಷೆ ದಿನಾಂಕ ಸ್ಪಷ್ಟವಾಗದ ಕಾರಣಕ್ಕೆ ತಮ್ಮ ಕೌಟುಂಬಿಕ ಕಾರ್ಯಕ್ರಮ ಅಥವಾ ಇನ್ಯಾವುದೇ ಪ್ರಮುಖ ಚಟುವಟಿಕೆಯನ್ನು ನಿಗದಿ ಮಾಡಿಕೊಳ್ಳದ ಸ್ಥಿತಿ ಇದೆ.

ಆಯೋಗ ಮಾಡಿದ್ದೇನು?

ಆಗಸ್ಟ್ 27ರಂದು ನಡೆದಿದ್ದ ಪರೀಕ್ಷೆಗೆ ಸಂಬಂಧಿಸಿದಂತೆ ಆಯೋಗದಿಂದ ಸರ್ಕಾರಕ್ಕೆ ವರದಿಯೂ ಸಲ್ಲಿಕೆಯಾಗಿಲ್ಲ. ಒಂದು ಬಾರಿ ಮುಖ್ಯಮಂತ್ರಿಯವರನ್ನು ಆಯೋಗದ ಪ್ರತಿನಿಧಿಗಳು ಭೇಟಿಯಾಗಿ ಮೌಖಿಕ ಮಾಹಿತಿ ಕೊಟ್ಟಿದ್ದು, ಸಿಎಂ ಗರಂ ಆಗಿದ್ದು ಬಿಟ್ಟರೆ ಮುಂದೆ ಯಾವುದೇ ಬೆಳವಣಿಗೆ ನಡೆದಿಲ್ಲ. ಪ್ರಕ್ರಿಯೆಯ ಭಾಗವಾಗಿ ಆಯೋಗದ ಕಾರ್ಯದರ್ಶಿ ಪರೀಕ್ಷೆಯಲ್ಲಿನ ವ್ಯತ್ಯಾಸದ ಕುರಿತು ಸಮಗ್ರ ವರದಿ ಸಲ್ಲಿಸಬೇಕಾಗುತ್ತದೆ. ಹೊಣೆಗಾರರು ಯಾರೆಂಬುದನ್ನೂ ತಿಳಿಸಬೇಕಾಗುತ್ತದೆ. ಅದಕ್ಕೂ ಮುನ್ನ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಬೇಕಾಗುತ್ತದೆ. ಅಲ್ಲಿ ವಿಶ್ಲೇಷಣೆ ನಡೆಸಬೇಕು ಹಾಗೂ ಮುಂದೆ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಬಗ್ಗೆ ಪರಾಮರ್ಶೆ ಮಾಡಬೇಕಾಗುತ್ತದೆ. ಪ್ರತಿ ಮಂಗಳವಾರ ಆಯೋಗದ ಆಡಳಿತ ಮಂಡಳಿ ಸಭೆ ನಡೆಯುತ್ತದೆ.

ಈ ಬೆಳವಣಿಗೆ ಬಳಿಕ ನಡೆದ ಸಭೆಯಲ್ಲಿ ಪರೀಕ್ಷೆ ಕುರಿತು ಹೆಚ್ಚು ಚರ್ಚೆಯಾಗಿಲ್ಲ ಎನ್ನಲಾಗಿದೆ. ಆದರೆ ಸಭೆಯ ಹೊರತಾಗಿ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿ ದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಶ್ನೆ ಪತ್ರಿಕೆಯಲ್ಲಿ 58 ತಪ್ಪುಗಳಿವೆ ಎಂದು ಅಭ್ಯರ್ಥಿಗಳು ವಾದಿಸುತ್ತಿದ್ದರೆ, ಕೆಪಿಎಸ್ಸಿ ಮಾತ್ರ ತನ್ನ ತಪ್ಪು ಒಪ್ಪಿಕೊಳ್ಳಲು ಸಿದ್ಧವಿಲ್ಲ. 22 ಸಣ್ಣಪುಟ್ಟ ದೋಷವಿದೆ ಎಂದು ಹೇಳಿಕೊಳ್ಳುತ್ತಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಪರೀಕ್ಷೆ ಮುಂದೂಡುವ ತೀರ್ಮಾನ ಪ್ರಕಟಿಸಿದ್ದ ಮುಖ್ಯಮಂತ್ರಿಯವರು ‘ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಕ್ರಮ ಜರುಗಿಲ್ಲ.

ಮುಂದೇನು?: ಮರುಪರೀಕ್ಷೆ ನಡೆಸಲು ಆಯೋಗ ದಿನಾಂಕ ನಿಗದಿ ಮಾಡಿ ಪ್ರಕಟಣೆ ಹೊರಡಿಸಬೇಕಾಗುತ್ತದೆ. ಅದಕ್ಕೂ ಮೊದಲು ಪರೀಕ್ಷೆ ನಡೆಸುವ ಕೇಂದ್ರಗಳಲ್ಲಿ ಬೇರೆ ಪರೀಕ್ಷೆ ಇದೆಯೋ ಇಲ್ಲವೋ ಎಂದು ನೋಡಿಕೊಳ್ಳಬೇಕಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇತರೆ ಯಾವುದೇ ನೇಮಕಕ್ಕಾಗಿ ಪರೀಕ್ಷೆ ಇಟ್ಟುಕೊಂಡಿರುವಂತಿಲ್ಲ. ಯುಪಿಎಸ್ಸಿಯಂತಹ ಪರೀಕ್ಷೆ ಕೂಡ ನಿಗದಿಯಾಗಿರಬಾರದು ಅಥವಾ ಇತರೆ ಯಾವುದೇ ಪ್ರವೇಶ ಪರೀಕ್ಷೆ ಇರಕೂಡದು. ಅಂತಹ ದಿನವನ್ನು ನಿಗದಿ ಮಾಡುವುದು ಅಷ್ಟು ಸಲೀಸಲ್ಲ. ಪರೀಕ್ಷಾ ಕರ್ತವ್ಯಕ್ಕೆ ಶಿಕ್ಷಣ ಇಲಾಖೆ ಸೇರಿ ಬೇರೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಲಭ್ಯತೆ ನೋಡಿಕೊಳ್ಳಬೇಕು. ಇನ್ನೊಂದು ಭಾಗದಲ್ಲಿ ದೋಷಪೂರಿತ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಕ್ರಮವಾಗಬೇಕಾಗಿದೆ. ಬಳಿಕ ಉತ್ತರ ಪತ್ರಿಕೆ-ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಆದೇಶ ನೀಡಬೇಕಾಗುತ್ತದೆ. ಪ್ರಸ್ತುತ ಅಕ್ಟೋಬರ್, ನವೆಂಬರ್​ನಲ್ಲಿ ವಿವಿಧ ಪರೀಕ್ಷೆ ನಡೆಯುವುದಿದೆ. ಹೀಗಾಗಿ ಡಿಸೆಂಬರ್​ವರೆಗೂ ದಿನಾಂಕ ನಿಶ್ಚಯ ಕಷ್ಟ ಎಂದೇ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

ವಿವಾದಾತ್ಮಕ ನೇಮಕ: ಕಾಂಗ್ರೆಸ್​ನಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ತೀವ್ರ ವಿರೋಧದ ನಡುವೆ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಭೋಜ್ಯಾನಾಯ್ಕ ಅವರನ್ನು ನೇಮಕ ಮಾಡಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೈಗಾರಿಕಾ ರಸಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಅವರು ಕುವೆಂಪು ವಿಶ್ವವಿದ್ಯಾಲಯದ ಕುಲಚಿವರಾಗಿ ಹಾಗೂ ಪರೀಕ್ಷಾಂಗದ ಕುಲಚಿವರಾಗಿದ್ದರು. ಈ ನೇಮಕದ ಬಗ್ಗೆ ಕಾಂಗ್ರೆಸ್​ನಲ್ಲಿ ತೀವ್ರ ಅಸಮಾಧಾನ ಕಾಣಿಸಿದ್ದು, ಭೋಜ್ಯಾನಾಯ್ಕ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದು, ವಿಚಾರಣೆ ಬಾಕಿ ಇರುವಾಗಲೇ ಅವರನ್ನು ನೇಮಕ ಮಾಡಿದ್ದೆಷ್ಟು ಸರಿ ಎಂದು ಪಕ್ಷದ ನಿಷ್ಠರು ದನಿ ಎತ್ತಿದ್ದಾರೆ. ಅವರು ಕುಲಸಚಿವರಾಗಿದ್ದ ಅವಧಿಯಲ್ಲೇ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದ ಕುರಿತು ಲೋಕಾಯುಕ್ತದಲ್ಲಿ ದೂರು ಎದುರಿಸುತ್ತಿದ್ದರು. ಅರಣ್ಯ ಇಲಾಖೆಯು ಇವರ ಮೇಲೆ ಪ್ರಕರಣವೊಂದನ್ನು ದಾಖಲಿಸಿತ್ತು. 2023ರ ಆಗಸ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಇವರ ಹೆಸರನ್ನು ಶಿಫಾರಸು ಮಾಡಿದ್ದರೂ, ದಾಖಲೆ ಬಹಿರಂಗವಾದ ಬೆನ್ನಲ್ಲೇ ಅವರ ಹೆಸರು ಕೈಬಿಡಲಾಗಿತ್ತು. 2024ರ ಜೂನ್ 19ರಂದು ಪುನಃ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು.

ಸ್ಪಷ್ಟಗೊಳ್ಳಬೇಕಾದ ಮೂರು ವಿಚಾರ

1. ಆ. 27ರಂದು ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಒಟ್ಟು 2,10,916 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು 1,31,885 ಮಂದಿ ಹಾಜರಾಗಿದ್ದರು. ಈಗ ಅಂದು ಹಾಜರಾದವರಿಗೆ ಮಾತ್ರ ಅವಕಾಶ ಕೊಡಬೇಕೋ ಅಥವಾ ಅರ್ಜಿ ಹಾಕಿದ ಎಲ್ಲರಿಗೂ ಅವಕಾಶ ಕೊಡಬೇಕೋ?

2. ಅಭ್ಯರ್ಥಿಗಳಿಗೆ ಅವರ ಸ್ವಂತ ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಲು ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಸಾಕಷ್ಟು ಅಭ್ಯರ್ಥಿಗಳು ವಸತಿ, ಸಂಚಾರ ವಿಷಯವಾಗಿ ಹೈರಾಣಾಗಿದ್ದರು. ಮರುಪರೀಕ್ಷೆಯಲ್ಲಿ ಅವರದೇ ಜಿಲ್ಲೆಯಲ್ಲಿ ಅವಕಾಶ ಕೊಡಬೇಕೆಂಬ ಬೇಡಿಕೆ ಇದೆ.

3. ಪ್ರಶ್ನೆ ಪತ್ರಿಕೆಯಲ್ಲಿ ವಿಷಯವಾರು ಅಂಕ ವಿಂಗಡಣೆ ನಿಯಮ ಪಾಲಿಸಿಲ್ಲ. ಕರೆಂಟ್ ಅಫೇರ್ಸ್​ಗೆ ಆದ್ಯತೆ ಇರಲಿಲ್ಲ ಎಂಬ ದೂರಿದೆ. ಹೀಗಾಗಿ ಪ್ರಶ್ನೆಪತ್ರಿಕೆ ಚೌಕಟ್ಟಿನ ಬಗ್ಗೆ ಮರು ವಿಮರ್ಶೆ ಅನಿವಾರ್ಯವಾಗಿದೆ.