ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಸಂಘಟನೆಯನ್ನು ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನ ಮಂಥನ ನಡೆಸಿದ್ದು, ಕಾರ್ಯಾಧ್ಯಕ್ಷರನ್ನು ಬದಲಿಸುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿದೆ.
ಇದೇ ವೇಳೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಎರಡೂ ನಿಭಾಯಿಸುವುದು ಕಷ್ಟ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ಲೋಕಸಭೆ ಚುನಾವಣೆ ಎದುರಿಗಿದೆ, ಸ್ಥಳೀಯ ಸಂಸ್ಥೆ ಕೂಡ ಬರಲಿದೆ. ಈ ಸಂದರ್ಭದಲ್ಲಿ ದೊಡ್ಡ ಇಲಾಖೆಯ ಜವಾಬ್ದಾರಿಯೊಂದಿಗೆ ಪಕ್ಷದ ಕೆಲಸ ನಿಭಾಯಿಸುವುದು ಕಷ್ಟ ಎಂಬ ಅಭಿಪ್ರಾಯವನ್ನು ಪಕ್ಷದ ರಾಜ್ಯ ಉಸ್ತುವಾರಿ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಹೈಕಮಾಂಡ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ.
ಇದೇ ವೇಳೆ ಪಕ್ಷ ಕೂಡ ಐದು ಕಾರ್ಯಾಧ್ಯಕ್ಷರ ಪೈಕಿ ಮೂವರು ಸಚಿವರೂ ಆಗಿರುವುದರಿಂದ ಈ ಮೂವರನ್ನು ಬದಲಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸಚಿವರು ಹಾಗೂ ಮುಖಂಡರ ದೆಹಲಿ ಭೇಟಿ ವೇಳೆ ಈ ವಿಷಯ ಕೂಡ ಚರ್ಚೆಗೆ ಬರಲಿದೆ. ಬಳಿಕ ಅಭಿಪ್ರಾಯ ಸಂಗ್ರಹ ಕೂಡ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಸ್ತುತ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಚಂದ್ರಪ್ಪ ಕಾರ್ಯಾಧ್ಯಕ್ಷರಾಗಿದ್ದಾರೆ. ಸಲೀಂ ಅಹ್ಮದ್ ಅವರು ಲೋಕಸಭೆ ಚುನಾವಣೆಗೆ ಹಾವೇರಿಯಿಂದ ಕಣಕ್ಕಿಳಿಯುವ ಆಶಯ ಹೊಂದಿದ್ದು, ಅವರಿಗೆ ಟಿಕೆಟ್ ಖಾತ್ರಿಯಾದರೆ ಕಾರ್ಯಾಧ್ಯಕ್ಷ ಸ್ಥಾನ ನಿರ್ವಹಣೆ ಕಷ್ಟವಾಗಲಿದೆ. ಅದೇ ರೀತಿ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ ಅಭಿಪ್ರಾಯ ಪಡೆದು ಮುಂದುವರಿಯಲು ಪಕ್ಷ ನಿರ್ಧರಿಸಿದೆ.
ಇನ್ನು ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುತ್ತಿಲ್ಲ ಎಂದು ಸಹಿ ಸಂಗ್ರಹ ನಡೆಸಿದ ಶಾಸಕರಿಗೆ ನಿಗಮ ಮಂಡಳಿ ನೀಡುವ ಮೂಲಕ ಸಮಾಧಾನಪಡಿಸುವ ಸಾಧ್ಯತೆಗಳೂ ಇವೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ, ಬಿ.ಆರ್.ಪಾಟೀಲ್, ವಿನಯ್ ಕುಲಕರ್ಣಿ ಹೊರತುಪಡಿಸಿ ಸಹಿ ಹಾಕಿದ ಉಳಿದ ಶಾಸಕರಿಗೆ ನಿಗಮ ಮಂಡಳಿ ಸಿಗಬಹುದು ಎಂಬ ಮಾತು ಪಕ್ಷದ ವೇದಿಕೆಯಲ್ಲಿದೆ.
- ಶಾಸಕರ ಕೋಪ ತಣಿಸಲು ಹೊಸ ಸೂತ್ರ
ಆಡಳಿತ ಪಕ್ಷದ ಶಾಸಕರು ಮತ್ತು ಸರ್ಕಾರ ನಡುವೆ ಉಂಟಾಗುವ ಗೊಂದಲ ಪರಿಹಾರ ಮಾಡುವ ಉದ್ದೇಶದಿಂದ ಸಮನ್ವಯ ಸಮಿತಿ ರಚಿಸುವ ಸಾಧ್ಯತೆ ಇದ್ದು, ದೆಹಲಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಲಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಯಾವುದೇ ಶಾಸಕರು ತಮ್ಮ ಬೇಡಿಕೆ ಈಡೇರದಿದ್ದರೆ ಸಮನ್ವಯ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಬಹುದು. ಸಮಿತಿಯ ಅಧ್ಯಕ್ಷರು ಸಚಿವರಿಗೆ ನೇರವಾಗಿ ಸಂಪರ್ಕಿಸಿ ಬೇಡಿಕೆ ಈಡೇರಿಸುವ ಪರಿಹಾರ ಸೂತ್ರವನ್ನು ಕಂಡುಕೊಳ್ಳುವ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿದೆ.
ಇನ್ನು ಸಮನ್ವಯ ಸಮಿತಿ ರಚನೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ದೆಹಲಿಯಲ್ಲಿ ಏನೇನು ಚರ್ಚೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಸಮಿತಿ ರಚನೆಯ ಅಗತ್ಯ ಇಲ್ಲ. ಸಚಿವರು ಕಾರ್ಯಕರ್ತರಿಗೆ ಹೆಚ್ಚು ಸಮಯ ಕೊಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಬಿ.ಕೆ.ಹರಿಪ್ರಸಾದ್‌ಗೆ ಯಾವ ಹೊಣೆ?
ತಮ್ಮನ್ನು ಕಡೆಗಣಿಸಲಾಗುತ್ತಿದ್ದೆ ಎಂದು ಅಸಮಾಧಾನ ಹೊರಹಾಕಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ದೆಹಲಿ ನಾಯಕರು ಚರ್ಚೆ ನಡೆಸಿದ್ದಾರೆ. ಹರಿಪ್ರಸಾದ್ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಂತೆ ಹಿರಿಯ ನಾಯಕರು ಮನೆಗೆ ದೌಡಾಯಿಸಿ ಸಮಾಧಾನಪಡಿಸಿದ್ದರು ಮತ್ತು ದೆಹಲಿಗೂ ಸಂದೇಶ ಕಳಿಸಿದ್ದರು. ಇದೀಗ ಅವರನ್ನು ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಅವಕಾಶ ಕಲ್ಪಿಸಲು ಇರುವ ಸಾಧ್ಯತೆಯ ಬಗ್ಗೆ ವಿಚಾರ ವಿನಿಮಯ ಕೂಡ ನಡೆದಿದೆ.