ಬೆಂಗಳೂರು: ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಇದೇ ಆ.1ರಂದು ತೆರೆಗೆ ಬರಲು ರೆಡಿಯಾಗಿದೆ. ‘ದಿಯಾ’, ‘ದೂರದರ್ಶನ’, ‘ಭುವನಂ ಗಗನಂ’ ಚಿತ್ರಗಳಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬಾರ್ ‘ಕೊತ್ತಲವಾಡಿ’ಯಲ್ಲಿ ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಕಿರುತೆರೆ ಖ್ಯಾತಿಯ ಕಾವ್ಯಾ ಶೈವ ಜೋಡಿಯಾಗಿದ್ದಾರೆ. ಟೀಸರ್ ಹಾಗೂ ಸಾಂಗ್‌ಗಳ ಮೂಲಕ ಗಮನಸೆಳೆದಿರುವ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಪೃಥ್ವಿ ಅರ್ಭಟ ಟ್ರೇಲರ್‌ನ ಹೈಲೈಟ್. ಕೊತ್ತಲವಾಡಿ ಎಂಬ ಊರಿನ ಸುತ್ತು ಸುತ್ತುವ ಈ ಕಥೆಯಲ್ಲಿ ರಾಜಕೀಯ ದಂಗಲ್, ಪೊಲೀಸ್ ವ್ಯವಸ್ಥೆ, ಅವಕಾಶವಾದಿತನ, ನಾಯಕನ ಹೋರಾಟ, ಛಲ ಅಂಶಗಳಿವೆ. ಪುಷ್ಪ ಅರುಣ್‌ಕುಮಾರ್, ‘ಸೆಲೆಬ್ರಿಟಿ ಮನೆಯವರಾಗಿ ಭಯ, ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಏನೋ ಹೇಳದೆ ಮಾಡಿಲ್ಲ. ಜನ ಒಪ್ಪಿಕೊಂಡರೆ ಎಲ್ಲರಿಗೂ ಖುಷಿ’ ಎಂದರು. ಇನ್ನು ‘ಕೊತ್ತಲವಾಡಿ’ಗೆ ಶ್ರೀರಾಜ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಾನಸಿ ಸುಧೀರ್, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಕಲಾಬಳಗದಲ್ಲಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ, ವಿಕಾಸ್ ವಸಿಷ್ಠ ಹಾಗೂ ಅಭಿನಂದನ್ ಕಶ್ಯಪ್ ಸಂಗೀತ, ಕಾರ್ತಿಕ್ ಎಸ್. ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ ಚಿತ್ರಕ್ಕಿದೆ.
ಎರಡನೇ ಪ್ರಾಜೆಕ್ಟ್ ಕೈಗೆತ್ತಿಕೊಂಡ ಯಶ್ ತಾಯಿ: ಪುಷ್ಪಾ ಅರುಣ್‌ಕುಮಾರ್ ‘ಪಿಎ’ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ ‘ಕೊತ್ತಲವಾಡಿ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಬ್ಯಾನರಡಿಯಲ್ಲಿ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ನಟ ಶರಣ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದ್ದು, ‘ಕೊತ್ತಲವಾಡಿ’ ರಿಲೀಸ್ ಆದ ಕೆಲ ದಿನಗಳ ಬಳಿಕ ತಾರಾ ಹಾಗೂ ತಂತ್ರಜ್ಞ ಬಳಗವನ್ನು ಪರಿಚಯಿಸುವ ಮೂಲಕ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಲಾಗುವುದು ಎಂದು ಪುಷ್ಪಾ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.