ಹೊಳೆನರಸೀಪುರ: ಪಟ್ಟಣದ ಕೋಟೆ ಶ್ರೀ ಮಾರಮ್ಮ ದೇವಾಲಯದಲ್ಲಿ ಶ್ರೀ ಮಾರಮ್ಮದೇವಿ ಹಬ್ಬ ಹಾಗೂ 11ನೇ ವರ್ಷದ ವಾರ್ಷಿಕ ಪೂಜೆ ಅಂಗವಾಗಿ ಪೇಟೆಯ ಭಕ್ತರಿಗಾಗಿ ಮಂಗಳವಾರ ಸಂಪ್ರದಾಯದ ಆಚರಣೆಯಂತೆ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.
ಭಾನುವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಹೇಮಾವತಿ ನದಿ ತೀರದಲ್ಲಿ ಗಂಗೆ ಪೂಜೆ ನೆರವೇರಿಸಿ, ಗಂಗಾ ಕಳಸ ಹೊತ್ತ ಗಂಗಾಮತಸ್ಥ ಸುಮಂಗಲಿಯರು ಹಾಗೂ ಭಕ್ತರು ಮಂಗಳವಾಧ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿ, ಗಂಗ ಕಳಸದಿಂದ ದೇವಿಯ ಮೂಲ ವಿಗ್ರಹಕ್ಕೆ ಪುಣ್ಯಾಹ, ಪಂಚಾಮೃತ ಅಭಿಷೇಕ ನರೆವೇರಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಹೋಮದ ಕುಂಡದಲ್ಲಿ ದುರ್ಗಾ ಹೋಮ ನೆರವೇರಿಸಿ ಶ್ರೀ ದೇವಿಯ ಉತ್ಸವ ಮೂರ್ತಿಗೆ ವಿಶೇಷವಾಗಿ ಅಲಂಕರಿಸಿ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮಹಾಮಂಗಳಾರತಿ ನೆರವೇರಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಪೂರ್ವಿಕರ ಆಚರಣೆಯಂತೆ ಮಂಗಳವಾರ ಪೇಟೆಯ ಭಕ್ತರಿಗಾಗಿ ಆಯೋಜಿಸಿದ್ದ ವಿಶೇಷ ಪೂಜಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು. ಹಿರಿಯ ಅರ್ಚಕ ಕುಮಾರ್, ಕಿಟ್ಟಿ ಉಪ್ಪಾರ್, ಮಂಜು, ಆಟೋ ರಾಜು, ದೀಪು, ರಂಗಸ್ವಾಮಿ, ಕೇಶವ, ಮನೋಜ್, ದೇವರಾಜು, ಶ್ರೀಧರ್ ಇತರರು ದೇವಿಯ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.