ನ್ಯೂಸ್

ಸೆ.೨೫ ರೊಳಗೆ ಕೋವಿಡ್ ಮೊದಲ ಲಸಿಕೆ ಹಾಕಲು ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಮಡಿಕೇರಿ: ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸೆ.೨೫ ರೊಳಗೆ ಕೋವಿಡ್ ನಿರೋಧಕ ಮೊದಲ ಲಸಿಕೆ ಹಾಕಬೇಕೆಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಸಿಕೆ ಹಾಕುವುದರಲ್ಲಿ ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಗುರಿ ಮುಟ್ಟಬೇಕು. ಅದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ವೆಂಕಟೇಶ್‌ಗೆ ಸೂಚನೆ ನೀಡಿದರು.
೪೮ ಸಾವಿರ ಜನರಿಗೆ ಮೊದಲ ಲಸಿಕೆ ಹಾಕಲು ಬಾಕಿ ಇದೆ. ಪ್ರತಿನಿತ್ಯ ೫ ಸಾವಿರ ಲಸಿಕೆ ಬರುತ್ತಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವ ಆದಿವಾಸಿಗಳ ಮನವೊಲಿಸಬೇಕು. ಗ್ರಾಪಂ ಪಿಡಿಒ ಉಸ್ತುವಾರಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿಸಬೇಕು. ಸಿಇಒ, ಇಒ, ಪಿಡಿಒ, ಟಿಎಚ್ ಸಂಘಟಿತರಾಗಿ ಕಾರ್ಯೋನ್ಮುಖ ರಾಗಬೇಕೆಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನೀಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮುಡಾ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಇದ್ದರು.