ಕೊಪ್ಪಳ: ದರ್ಗಾ ಅಭಿವೃದ್ಧಿಗೆ 6 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮೊದಲ ದಿನವೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಗ್ ಶಾಕ್ ನೀಡಿದ್ದಾರೆ.
ತಮ್ಮ ರಾಜಕೀಯ ನಡೆಯ ಬಗ್ಗೆ ಇನ್ನೂ ಸ್ಪಷ್ಟ ನಿಲುವು ಘೋಷಿಸದ ಜನಾರ್ದನ ರೆಡ್ಡಿ, ಜ.25ಕ್ಕೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ರಾಜಕೀಯ ನಡೆಯ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಅದಕ್ಕೂ ಮುನ್ನವೇ ರೆಡ್ಡಿ ಮಠ-ಮಾನ್ಯಗಳಿಗೆ ಹಾಗೂ ದರ್ಗಾಗಳಿಗೆ ಭೇಟಿ ನೀಡುವ ಮೂಲಕ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಗಂಗವತಿಯ ಸ್ಥಳೀಯ ಮುಖಂಡರನ್ನು ಸಹ ಭೇಟಿ ಮಾಡುತ್ತಿದ್ದಾರೆ.
ಮುಸ್ಲಿಮತ ಮತಬುಟ್ಟಿಯ ಮೇಲೆ ಕಣ್ಣಿಟ್ಟಿರುವ ಜನಾರ್ದನ ರೆಡ್ಡಿ, ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ ದೇಣಿಗೆ ನೀಡಿದ್ದು, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ ಬ್ಯಾಂಕ್ಗೆ ರೆಡ್ಡಿ ನೇರವಾಗಿ ಕೈ ಹಾಕಿದ್ದಾರೆ.
ದರ್ಗಾದ ಶಾದಿ ಮಹಲ್ ನಿರ್ಮಾಣಕ್ಕೆ ಧನ ಸಹಾಯ ಮಾಡಲು ರೆಡ್ಡಿ ವಾಗ್ದಾನ ಮಾಡಿದ್ದು, 6 ಕೋಟಿ ರೂ. ವೆಚ್ಚದ ಕಾಂಟ್ರಾಕ್ಟ್ಗೆ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ನಿರ್ಮಾಣ ಜವಾಬ್ದಾರಿ ನೀಡಿರುವ ರೆಡ್ಡಿ, ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ಸಹಿ ಮಾಡಿದ್ದಾರೆ.
ದರ್ಗಾದಲ್ಲೇ ಕಾಂಟ್ರಾಕ್ಟ್ ಪತ್ರಗಳಿಗೆ ರೆಡ್ಡಿ ಸಹಿ ಮಾಡಿದ್ದು, ಮೊದಲ ದಿನವೇ ಗಂಗಾವತಿ ಹಾಲಿ-ಮಾಜಿ ಶಾಸಕರಿಗೆ ಜನಾರ್ದನ ರೆಡ್ಡಿ ಶಾಕ್ ನೀಡಿದ್ದಾರೆ. ರೆಡ್ಡಿ ನಡೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಲಿಬಿಲಿಗೊಂಡಿದ್ದು, ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಈಗಾಗಲೇ ಡಿಸ್ಟರ್ಬ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್)