ಕೊಪ್ಪಳದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗೆ ಆಹುತಿಯಾದ ಅಂಗಡಿ ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಪರಿಶೀಲಿಸಿ, ಸಜೀವ ದಹನವಾದ ಯುವಕನ ಕುಟುಂಬದವರಿಗೆ ಶನಿವಾರ ಸಾಂತ್ವನ ಹೇಳಿದರು. 2. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟಿರುವ ಹಣ್ಣಿನ ಅಂಗಡಿ. 3. ಮೃತ ಯುವಕ ವೀರೇಶ್. 
ನ್ಯೂಸ್

ಹಣ್ಣಿನ ಅಂಗಡಿಗೆ ಬೆಂಕಿ! ಅಂಗಡಿಯಲ್ಲೇ ಸಜೀವ ದಹನವಾದ ಯುವಕ

ಕೊಪ್ಪಳ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಹಣ್ಣಿನ ಅಂಗಡಿಯಲ್ಲಿ ಶನಿವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಮಲಗಿದ್ದ ಯುವಕ ಸಜೀವ ದಹನವಾಗಿದ್ದಾನೆ. ಹಣ್ಣಿನ ವ್ಯಾಪಾರಿ ಲಿಂಗಜ್ಜ ಮುಂಡರಗಿ ಎಂಬುವವರ ಅಣ್ಣನ ಮಗ ವೀರೇಶ್(18) ಮೃತ ಯುವಕ.

ಬೆಳಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಆಗಮಿಸಿದಾಗ ವೀರೇಶ ಕಾಣಸಿಗದ ಬಗ್ಗೆ ಲಿಂಗಜ್ಜ ತಿಳಿಸಿದ್ದಾರೆ. ನಂತರ ಅಧಿಕಾರಿಗಳು ಅಂಗಡಿಯನ್ನು ಪರಿಶೀಲಿಸಿದಾಗ ಬೆಂದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ವೀರೇಶ್ ಚಿಕ್ಕವನಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದು, ಚಿಕ್ಕಪ್ಪನ ಹತ್ತಿರ ಬೆಳೆದಿದ್ದ. ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ತಾನೂ ಹಣ್ಣಿನ ವ್ಯಾಪಾರ ಮಾಡಿಕೊಂಡು ಮನೆಯವರಿಗೆ ನೆರವಾಗಿದ್ದ. ಆದರೆ, ವಿಧಿಯಾಟಕ್ಕೆ ಬಾಳಿ ಬದುಕಬೇಕಿದ್ದ ಯುವಕ ಅಕಾಲಿಕ ಸಾವಿಗೆ ತುತ್ತಾಗಿದ್ದನ್ನು ಕಂಡು ನೆರೆದಿದ್ದ ಜನರು ಕಣ್ಣೀರು ಹಾಕಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಕ್ಕದಲ್ಲಿದ್ದ ಜೆರಾಕ್ಸ್ ಮತ್ತು ವಾಚ್ ರಿಪೇರಿ ಅಂಗಡಿಗೂ ಬೆಂಕಿ ಆವರಿಸಿತ್ತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ.

ವಿಷಯ ತಿಳಿಯುತ್ತಲೇ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳಕ್ಕಾಗಮಿಸಿ, ಯುವಕನ ಮನೆಯವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದರು.