ನ್ಯೂಸ್

ಶಾಸಕ ಮಹೇಶ್​ರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ನಮಗೆ ಯಾವುದೇ ಮುಜುಗರ ಇಲ್ಲ...

ಕೊಳ್ಳೇಗಾಲ: ಸರ್ಕಾರ ರಚನೆ ವೇಳೆ ಸಹಕಾರ ನೀಡಿರುವ ಕೊಳ್ಳೇಗಾಲ ಶಾಸಕ ಎನ್​.ಮಹೇಶ್​ ಬಿಜೆಪಿಗೆ ಬರುವ ಕುರಿತು ಅವರೇ ತೀರ್ಮಾನಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಾಲ್ಗೊಳ್ಳುವ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಮಹೇಶ್​ ಅವರನ್ನು ಬಿಜೆಪಿಗೆ ಯಾವಾಗ ಸೇರ್ಪಡೆ ಮಾಡಿಕೊಳ್ಳುತ್ತೀರಿ ಎಂದು ಕೇಳಬೇಡಿ. ಈ ಕುರಿತು ಅವರನ್ನೇ ಕೇಳಬೇಕು. ಮಹೇಶ್​ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಷಯದಲ್ಲಿ ನಮಗೆ ಯಾವುದೇ ಮುಜುಗರ ಅಥವಾ ಮುಚ್ಚುಮರೆ ಇಲ್ಲ ಎಂದರು.

ಕೊಳ್ಳೇಗಾಲಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ, ಕಂದಾಯ ಸಚಿವ ಆರ್​.ಅಶೋಕ್​, ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​, ಆಹಾರ ಸಚಿವ ಗೋಪಾಲಯ್ಯ ಅವರನ್ನು ಶಾಸಕ ಎನ್​.ಮಹೇಶ್​ ಪ್ರವಾಸಿ ಮಂದಿರದ ಎದುರು ಹರ್ಷಚಿತ್ತದಿಂದ ಸ್ವಾಗತಿಸಿದರು. ನಂತರ ತಮ್ಮ ಬೆಂಬಲಿಗರಾದ ನಗರಸಭೆ ಸದಸ್ಯರು ಹಾಗೂ ಮುಖಂಡರನ್ನು ಬಿಜೆಪಿ ನಾಯಕರಿಗೆ ಪರಿಚಯ ಮಾಡಿಕೊಟ್ಟರು.

ಎಚ್​.ವಿಶ್ವನಾಥ್​ ಧೃತಿಗೆಡುವುದು ಬೇಡ: ಕೊಳ್ಳೇಗಾಲ: ಎಚ್​.ವಿಶ್ವನಾಥ್​ ಸಚಿವರಾಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ವಿಶ್ವನಾಥ್​ಗೆ ಸಚಿವ ಸ್ಥಾನ ನೀಡುವ ಸಂಬಂಧ ಬಿಜೆಪಿ ಹೈಕಮಾಂಡ್​ಗೆ ರಾಜ್ಯದಿಂದ ಶಿಫಾರಸು ಮಾಡಲಾಗಿದೆ. ಈ ನಡುವೆ ಹೈಕೋರ್ಟ್​ ನೀಡಿರುವ ಆದೇಶ ಸರ್ಕಾರಕ್ಕೆ ಶಾಕ್​ ನೀಡಿದೆ. ಈ ವಿಚಾರವಾಗಿ ವಿಶ್ವನಾಥ್​ ಧೃತಿಗೆಡುವುದು ಬೇಡ. ಈ ಸಂಬಂಧ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದು ಎಂದು ಸಚಿವರಾದ ಆರ್​.ಅಶೋಕ್​, ಎಸ್​.ಟಿ.ಸೋಮಶೇಖರ್​, ಗೋಪಾಲಯ್ಯ ಹೇಳಿದರು.

ಬಿಜೆಪಿ ಬಗ್ಗೆ ವಿಶ್ವನಾಥ್​ ಅಸಮಾಧಾನ ಹೊರಹಾಕಿದ್ದರೆ ಅದು ಕೇವಲ ಅವರ ನೋವಿನ ಮಾತಾಗಿರುತ್ತದೆ. ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಯಾರೂ ಮಾಡಿಲ್ಲ. ನಾವೆಲ್ಲ ಅವರೊಂದಿಗಿದ್ದೇವೆ ಎಂದು ಅಭಯ ನೀಡಿದರು.