ನ್ಯೂಸ್

' ನಾನು ನನ್ನ ಹೆಂಡ್ತಿಯನ್ನು ಕೊಂದೆ' ಫೇಸ್‌ಬುಕ್ ಲೈವ್‌ ಬಂದ ಪತಿ...| Facebook Live

Facebook Live: ಕೇರಳದ ಪುನಲೂರು ಬಳಿಯ ಕೂತನಡಿಯಲ್ಲಿ 39 ವರ್ಷದ ಮಹಿಳೆಯನ್ನು ಆತನ ಗಂಡನೇ ಕೊಲೆ ಮಾಡಿ, ಫೇಸ್​ಬುಕ್​ ಲೈವ್​ನಲ್ಲಿ ಕೊಲೆ ಮಾಡಿರುವುದಾಗಿ ತಿಳಿಸಿರುವ ಆಘಾತಕಾರಿ ಘಟನೆ ಸೋಮವಾರ (ಸೆಪ್ಟೆಂಬರ್​ 22) ನಡೆದಿದೆ.

ಪೊಲೀಸರು ಹೇಳಿದ್ದೇನು?

ಕೊಲ್ಲಂನ ಕೂತನಾಡಿ ನಿವಾಸಿ ಶಾಲಿನಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಎಫ್‌ಐಆರ್ ಪ್ರಕಾರ, ದಂಪತಿಗಳ ನಡುವೆ ಹಲವಾರು ಸಮಸ್ಯೆಗಳಿದ್ದವು. ಇನ್ನು ಬೆಳಿಗ್ಗೆ 6.30 ರ ಸುಮಾರಿಗೆ, ಶಾಲಿನಿ ಸ್ನಾನ ಮಾಡಲು ಅಡುಗೆಮನೆಯ ಹಿಂಭಾಗದಲ್ಲಿರುವ ಪೈಪ್‌ಲೈನ್ ಬಳಿ ಹೋದಾಗ, ಆಕೆಯ ಪತಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆಕೆಯ ಕುತ್ತಿಗೆ, ಬೆನ್ನು ಮತ್ತು ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕೊಲೆ ಮಾಡಿದ ನಂತರ ಫೇಸ್​ಬುಕ್​ ಲೈವ್​ ಬಂದಿದ್ದು, ತನ್ನ ಹೆಂಡತಿ ಬಗ್ಗೆ ಅಪನಂಬಿಕೆ ಮತ್ತು ಆಭರಣಗಳ ದುರುಪಯೋಗ ಮಾಡಿದ್ದರಿಂದ ನಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ತದನಂತರ ಕೊಲ್ಲಂ ಪೊಲೀಸ್​ ಠಾಣೆಗೆ ಹೋಗಿದ್ದು, ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ವಿಷಯ ತಿಳಿದ ನಂತರ ಪೊಲೀಸರು ಮನೆ ತಲುಪಿದ್ದು, ಶಾಲಿನಿ ಮೃತಪಟ್ಟಿರುವುದನ್ನು ನೋಡಿದ್ದಾರೆ. ನಂತರ ಮೃತ ದೇಹವನ್ನುಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿರುವುದಾಗಿ ಪೊಲೀಸ್​ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಂಪತಿಯ 19 ವರ್ಷದ ಮಗ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಐಪಿಸಿ ಸೆಕ್ಸನ್​ 103(1) ಕೊಲೆ ಪ್ರಕರಣದಲ್ಲಿ ಬಂಧಿಸಿದ್ದು, ಕೊಲೆ ನಡೆದ ಮನೆಯನ್ನು ವಿಧಿವಿಜ್ಞಾನ ತಂಡ ಪರಿಶೀಲಿಸುತ್ತಿದೆ. ಹಾಗೆ ಶಾಲಿನಿ ಹಾಗೂ ಆರೋಪಿ ಇವರಿಬ್ಬರ ಮೊಬೈಲ್​ನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)