ನ್ಯೂಸ್

ವೈದ್ಯೆ ಅತ್ಯಾಚಾರ ಪ್ರಕರಣ: ಆರೋಪಿಗೆ ಅಶ್ಲೀಲ ವಿಡಿಯೋ ವೀಕ್ಷಿಸುವ ಚಟ! ಸಿಬಿಐ ತನಿಖೆಯಲ್ಲಿ ಹಲವು ವಿಷಯ ಬಹಿರಂಗ..

ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆ ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಒಬ್ಬ ವಿಕೃತ ಮನಸ್ಸಿನ ಕಾಮಾಂಧನಾಗಿದ್ದ ಎಂಬ ಅಂಶವನ್ನು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.

ಆರೋಪಿ ಅಶ್ಲೀಲ ವೀಡಿಯೋ ವೀಕ್ಷಿಸುವ ಚಟ ಹೊಂದಿದ್ದ ಎನ್ನಲಾಗಿದೆ. ಅವನು ವಿಕೃತ ಮನಸ್ಸಿನವನು ಎಂದು ಫೋರೆನ್ಸಿಕ್ ತಂಡ ಹೇಳಿದ ವಿಷಯಗಳನ್ನು ಸಿಬಿಐ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಆರೋಪಿ ವೈದ್ಯೆ ಕೇಳಿಕೊಂಡರೂ ಕನಿಕರ ತೋರಿಲ್ಲ. ಮೇಲಾಗಿ ಅವನು ಪಶುವಿನಂತೆ ವರ್ತಿಸಿದ್ದಾನೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೋಲ್ಕತ್ತಾ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳು ಈ ಪ್ರಕರಣದಲ್ಲಿ ಇದುವರೆಗೆ ನಡೆಸಿದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ವಿಭಿನ್ನ ವರದಿಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸುಮೋಟೋ ಆಗಿ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಆದೇಶದ ಕುರಿತು ಸಿಬಿಐ ಮತ್ತು ಕೋಲ್ಕತ್ತಾ ಪೊಲೀಸರು ವರದಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯೊಬ್ಬರು ಆರೋಪಿ ಸಂಜಯ್ ರಾಯ್ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಸಂಜಯ್ ರಾಯ್ ಅಶ್ಲೀಲ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದ ಎನ್ನಲಾಗಿದೆ. ಆರೋಪಿಯ ಮಾನಸಿಕ ಸ್ಥಿತಿಯನ್ನು ವಿಶ್ಲೇಷಿಸಿದ ವಿಧಿವಿಜ್ಞಾನ ತಂಡ ನೀಡಿದ ವರದಿಯನ್ನು ಆಧರಿಸಿ ಸಿಬಿಐ ಅಧಿಕಾರಿ ಈ ವಿಷಯಗಳನ್ನು ಹೇಳಿದ್ದಾರೆ.

ಆರೋಪಿ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಎನ್ನುವುದಕ್ಕೆ ಎಲ್ಲಾ ತಾಂತ್ರಿಕ ಮತ್ತು ವೈಜ್ಞಾನಿಕ ಪುರಾವೆಗಳಿವೆ. ಆಗಸ್ಟ್ 8 ರಂದು ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯ ಉಸಿರಾಟದ ವಿಭಾಗದ ಬಳಿ ಸಂಜಯ್ ರಾಯ್ ಕಾಣಿಸಿಕೊಂಡಿದ್ದು, ಆಗಸ್ಟ್ 9 ರಂದು ಬೆಳಿಗ್ಗೆ 4 ಗಂಟೆಗೆ ಮತ್ತೆ ಅದೇ ಕಟ್ಟಡಕ್ಕೆ ಹೋಗಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಸಿಬಿಐ ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಆರೋಪಿ ಸಂಜಯ್ ರಾಯ್‌ಗೆ ನಡೆಸಿದ ಡಿಎನ್‌ಎ ಪರೀಕ್ಷೆಯ ವಿವರಗಳನ್ನು ಸಿಬಿಐ ಅಧಿಕಾರಿ ಬಹಿರಂಗಪಡಿಸಿಲ್ಲ. ಇದರ ಜೊತೆಗೆ ಸಂಜಯ್ ರಾಯ್ ಒಬ್ಬನೇ ಟ್ರೈನಿ ವೈದ್ಯೆ ಮೇಲೆ ದೌರ್ಜನ್ಯ ಎಸಗಿದ್ದಾನಾ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬ ಸುದ್ದಿಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದ್ದಾರೆ. ಈ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಭವಾನಿಪುರದಲ್ಲಿರುವ ಆರೋಪಿ ಸಂಜಯ್ ರಾಯ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಅವನ ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಅವನೊಂದಿಗೆ ಕೆಲಸ ಮಾಡುವವರನ್ನು ವಿಚಾರಣೆ ನಡೆಸಲಾಯಿತು.