ನ್ಯೂಸ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಬೆಂಗಾಲ್ ಫೈಲ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ತಡೆದ ಕೊಲ್ಕೊತ್ತಾ ಪೊಲೀಸರು | The Bengal Files

The Bengal Files: ದಿ ಕಾಶ್ಮೀರಿ ಫೈಲ್ಸ್ ಚಿತ್ರ ನಿರ್ದೇಶನ ಖ್ಯಾತಿಯ ವಿವೇಕ್ ಅಗ್ನಿಹೋತ್ರಿಯವರ ಮುಂಬರುವ ದಿ ಬೆಂಗಾಲ್ ಫೈಲ್ಸ್ ಚಿತ್ರದ ಟ್ರೇಲರ್ ಬಿಡಗಡೆ ಕಾರ್ಯಕ್ರಮವನ್ನು ಕೊಲ್ಕೊತ್ತಾ ಪೊಲೀಸರು ತಡೆದಿರುವ ಘಟನೆ ಶನಿವಾರ (ಆಗಸ್ಟ್ 16) ವರದಿಯಾಗಿದ್ದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

1946ರ ಕೊಲ್ಕೊತ್ತಾ ದಂಗೆಗಳನ್ನು ಆಧರಿಸಿದೆ ಎಂದು ಹೇಳಲಾದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಮೊದಲು ಕೊಲ್ಕೊತ್ತಾದ ಮಲ್ಟಿಫ್ಲೆಕ್ಸ್​ನಲ್ಲಿ ಅನಾವರಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕೆಲವು ಒತ್ತಡಗಳ ಕಾರಣ ಬಳಿಕ ನಗರದ ಪಂಚತಾರ ಹೋಟೆಲ್​ನಲ್ಲಿ ಆಯೋಜಿಸಲಾಗಿತ್ತು ಎನ್ನಲಾಗಿದೆ. ಬೆಳಿಗ್ಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಕಾರ್ಯಕ್ರಮ ಪ್ರಾರಂಭವಾದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ತಡೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಸ್ಥಳದಲ್ಲಿ ಪೊಲೀಸರು ಮತ್ತು ಚಿತ್ರತಂಡದವರ ನಡುವೆ ವಾಗ್ವಾದ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವೇದಿಕೆ ಮೇಲೆ ಹತ್ತಿ ಟ್ರೇಲರ್ ಬಿಡುಗಡೆಗೆ ಬಳಸಬೇಕಾಗಿದ್ದ ಲ್ಯಾಪ್​​ಟಾಪ್​ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಿಂತಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, "ಇಂದು ಬಂಗಾಳ, ಇಲ್ಲಿ ಎಲ್ಲವೂ ಕೆಲವು ಕಾಣದ ಕೈಗಳ ನಿರ್ದೇಶನದಿಂದ ನಡೆಯುತ್ತದೆ. ನನ್ನನ್ನು ಬಂಧಿಸಿದರೂ ಸಹ ಸತ್ಯವನ್ನು ತೋರಿಸಲು ಬಿಡುವುದಿಲ್ಲ. ಸಕಾರಣವಿಲ್ಲದೇ ಹೋಟೆಲ್​ನ ವಿದ್ಯುತ್​ ಅನ್ನು ಕಡಿತಗೊಳಿಸಲಾಗಿದೆ. ಬೆಳಗ್ಗೆಯಿಂದ ಸಾಕಷ್ಟು ಪೊಲೀಸರು ಇಲ್ಲಿ ಜಮಾಯಿಸಿದ್ದಾರೆ. ನಾವೇನೂ ದರೋಡೆಕೋರರಲ್ಲ. ನಾವು ಸಿನಿಮಾ ಮಾಡುತ್ತಿದ್ದೇವೆ. ಸತ್ಯಜಿತ್ ರೇ ಅವರ ಭೂಮಿಯಲ್ಲಿ ಇದು ನಡೆಯುತ್ತೆ ಅಂತ ನಾನು ಭಾವಿಸಿರಲಿಲ್ಲ. ಇದು ಫ್ಯಾಸಿಸಂ ಅಲ್ಲದೇ ಏನು?" ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅವರನ್ನು ಮತ್ತು ಪತ್ನಿ ಪಲ್ಲವಿ ಜೋಶಿಯನ್ನು ಪೊಲೀಸರು ಸುತ್ತುವರೆದ ಮಾತನಾಡಲು ಬಿಡದೆ ಬಿಗಿ ಭದ್ರತೆಯಲ್ಲಿ ಕರೆದೊಯ್ದಿದ್ದಾರೆ.

ಅಗ್ನಿಹೋತ್ರಿ ಆರೋಪಕ್ಕೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ದೇಬಾಂಗು ಭಟ್ಟಾಚಾರ್ಯ, "ಯಾವುದೇ ಸಭಾಂಗಣವು ಅಂತಹ ವಿಷಯವನ್ನು ಪ್ರದರ್ಶಿಸಲು ಬಯಸದಿದ್ದರೆ, ಅದು ಆ ಸಭಾಂಗಣದ ನಿರ್ಧಾರ. ತೃಣಮೂಲ ಕಾಂಗ್ರೆಸ್ ಸಭಾಂಗಣವನ್ನು ಟ್ರೇಲರ್ ಅನ್ನು ತೋರಿಸಬೇಡಿ ಎಂದು ಕೇಳಿಲ್ಲ. ನಿರ್ದೇಶಕರು ಅಂತಹ ಆರೋಪಗಳಿಗೆ ಪುರಾವೆಗಳನ್ನು ಒದಗಿಸಬೇಕು" ಎಂದಿದ್ದಾರೆ.

ದಿ ಬೆಂಗಾಲ್ ಫೈಲ್ಸ್ ಚಿತ್ರದ ವಿಚಾರವಾಗಿ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕಿ ಪತ್ನಿ ಪಲ್ಲವಿ ಜೋಶಿ, ಅಭಿಷೇಕ್ ಅಗರ್ವಾಲ್ ವಿರುದ್ಧ ಲೇಕ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಎಫ್‌ಐಆರ್ ರದ್ದು ಕೋರಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೋಮವಾರ ನ್ಯಾಯಾಲಯವು ವಿಚಾರಣೆ ನಡೆಸಿ ಆಗಸ್ಟ್ 26 ರವರೆಗೆ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆ. 19ಕ್ಕೆ ನಡೆಯಲಿದೆ. (ಏಜೆನ್ಸೀಸ್)