ಕೋಲ್ಕತ: ಕಳೆದ ವರ್ಷ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಅಪರಾಧಿಗೆ ಕೋಲ್ಕತ್ತ ನ್ಯಾಯಾಲಯ ಮರಣದಂಡನೆ ವಿಧಿಸಿ ಗುರುವಾರ ಆದೇಶಿಸಿದೆ. ಜತೆಗೆ ಇದೊಂದು ತೀರಾ ಅಪರೂಪದ ಪ್ರಕರಣ ಎಂದು ಹೇಳಿದೆ.
2023ರ ಮಾರ್ಚ್ 26 ರಂದು ಇಲ್ಲಿನ ತಿಲಾಜಾಲಾ ಪ್ರದೇಶದ ತನ್ನ ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ಕಾಣೆಯಾಗಿದ್ದಳು. ಕುಟುಂಬದ ದೂರಿನ ಆಧಾರದ ಮೇಲೆ ಕೋಲ್ಕತ್ತ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಸಮೀಪದ ಫ್ಲಾಟ್ವೊಂದರಲ್ಲಿ ಆಕೆಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದುಯ ಖಚಿತವಾಗುತ್ತಿದ್ದಂತೆ, ಫ್ಲಾಟ್ ನಿವಾಸಿಯನ್ನು ಬಂಧಿಸಲಾಗಿತ್ತು. ಚಾಕೊಲೇಟ್ ನೀಡುವುದಾಗಿ ಹೇಳಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಅಲ್ಲದೇ ಆಕೆಯ ದೇಹದ ಮೇಲೆ ಆಯುಧದಿಂದ ಹಲ್ಲೆ ಮಾಡಿದ ಗಾಯದ ಗುರುತುಗಳಿದ್ದವು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು.
ಕೋಲ್ಕತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಜೂನ್ 16, 2023 ರಂದು ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ಜುಲೈ 24 ರಂದು ವಿಶೇಷ POCSO ನ್ಯಾಯಾಲಯದ ಮುಂದೆ ಆರೋಪಗಳನ್ನು ರೂಪಿಸಲಾಯಿತು.
ಈ ಎಲ್ಲಾ ಕೃತ್ಯಗಳನ್ನು ಆರೋಪಿ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟ ಅಲಿಪೋರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸುದೀಪ್ತೋ ಭಟ್ಟಾಚಾರ್ಯ ಅವರು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದರು. ರಾಜ್ಯದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತ ಬಾಲಕಿಯ ತಾಯಿಗೆ 10 ಲಕ್ಷ ರೂಪಾಯಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.