ಕೊಲ್ಹಾರ: ಪಟ್ಟಣ ತಾಲೂಕು ಕೇಂದ್ರವಾದರೂ ಇದುವರೆಗೆ ಮೂಲಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಇಲ್ಲಿನ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎರಡನೇ ವಾರ್ಡ್‌ನಲ್ಲಿ ಒಳಚರಂಡಿ, ಶೌಚಗೃಹ, ಚರಂಡಿ ಕಾಮಗಾರಿ ಮಾಡದೆ ನಿರ್ಲಕ್ಷೃ ಮಾಡುತ್ತಿದ್ದಾರೆ. ವಾರ್ಡ್ ನಂ.2, 3ರಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಮಹಿಳೆಯರು ಸಾರ್ವಜನಿಕ ಶೌಚಗೃಹಕ್ಕೆ ಹೊಗಲು ದಾರಿ ಇಲ್ಲದೆ ಪರದಾಡುವಂತಾಗಿದೆ. ಸುತ್ತಲೂ ಗಿಡ ಗಂಟೆಗಳು, ಜಾಲಿ ಮುಳ್ಳು ಬೆಳೆದು ಹುಳು ಹುಪ್ಪಡಿಗಳ ಕಾಟ ಹೆಚ್ಚಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಬಹುತೇಕ ಚರಂಡಿಗಳಲ್ಲಿ ನೀರು ನಿಂತು ಗಬ್ಬೆದ್ದು ನಾರುವಂತಾಗಿದೆ. ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲದ ಕಾರಣ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ಕೂಡಲೇ ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು. ಕೊಲ್ಹಾರ ಪಟ್ಟಣದೊಳಗೆ ಸಾರಿಗೆ ಎಲ್ಲ ಬಸ್‌ಗಳು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸರಸ್ವತಿ ಬಾಟಿ, ಸಂಗವ್ವ ಉದ್ದಾರ, ಬೋರಮ್ಮ ತುಪ್ಪದ, ಸಂಗಪ್ಪ ಗಿಡ್ಡಪ್ಪಗೋಳ, ಬಸಪ್ಪ ನಾಗರಾಳ ಇತರರಿದ್ದರು.