ನ್ಯೂಸ್

ಶಂಕಿತ ಉಗ್ರನ ಜತೆ ನಂಟು: ಕರ್ನಾಟಕ, ಚೆನ್ನೈ ಕ್ರೈಂ ಪೊಲೀಸರಿಂದ ಕೋಲಾರದಲ್ಲಿ ಇಬ್ಬರ ಬಂಧನ

ಕೋಲಾರ: ಉಗ್ರರ ಕರಿ ನೆರಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಹರಡಿದೆ. ಭಾನುವಾರ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಬೆಂಗಳೂರಿನ ಆರೋಪಿ ಮೆಹಬೂಬ್​ ಪಾಷಾನನ್ನು ಬಂಧಿಸಲಾಗಿತ್ತು. ಈತ ಕರ್ನಾಟಕದ ವಿವಿಧ ಜಿಲ್ಲೆಗಳ 11 ಶಂಕಿತ ಉಗ್ರರ ಸಂಪರ್ಕ ಇಟ್ಟುಕೊಂಡಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.

ಇದರ ಬೆನ್ನಲ್ಲೆ ಕೋಲಾರದ ಪ್ರಶಾಂತ್ ನಗರದ ಮೊಹಮದ್ ಜಹೀದ್ (24) ಮತ್ತು ಬೀಡಿ ಕಾಲನಿ‌ ನಿವಾಸಿ ಇಮ್ರಾನ್ ಖಾನ್ (42) ಎಂಬುವವರನ್ನು ಚೆನ್ನೈನ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಸಿಸಿಬಿ ಪೊಲೀಸರ ನೆರವಿನೊಂದಿಗೆ ಕ್ರೈಂ ಬ್ರಾಂಚ್ ಜನವರಿ 3ರಂದು ಪೊಲೀಸರು ಬಂಧಿಸಿದ್ದರು, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಮಾಹಿತಿ‌ ಬಹಿರಂಗವಾಗಿದೆ. ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ.

ಶಂಕಿತ ಉಗ್ರ‌ ಮೆಹಬೂಬ್​ಗೆ ಈ ಇಬ್ಬರೂ ಬಂಧಿತರು ಸಂಪರ್ಕದಲ್ಲಿದ್ದರು. ಬೆಂಗಳೂರಿನಲ್ಲಿ ನಕಲಿ‌ ದಾಖಲಾತಿ ಸಿದ್ಧ ಮಾಡಿಕೊಂಡಿದ್ದ ಇವರು, ವಿದೇಶಕ್ಕೆ ಹಾರಲು ಸಿದ್ದವಾಗಿದ್ದರು. ಇವರೊಂದಿಗೆ ಒಟ್ಟು 12 ಜನರ ತಂಡ ಇದೆ ಎಂಬ ಶಂಕೆ ಇದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.