ಬೆಂಗಳೂರು: ಶಾಲಾ-ಕಾಲೇಜು ಬಸ್ಸುಗಳ ಅಕ್ರಮ ನೋಂದಣಿ ಪ್ರಕರಣದಲ್ಲಿ ಆರ್‌ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿರುವುದು ಬೆಂಗಳೂರು ಗ್ರಾಮಾಂತರ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಅಕ್ರಮ ನೋಂದಣಿಗೆ ಸಂಬಂಧಿಸಿದಂತೆ ಕೆಲವೊಂದು ದಾಖಲಾತಿಗಳನ್ನು ಅರುಣಾಚಲ ಪ್ರದೇಶದ ಆರ್‌ಟಿಒ ಅಧಿಕಾರಿಗಳು ಅಲ್ಲಿಗೆ ತೆರಳಿದ್ದ ತನಿಖಾ ತಂಡಕ್ಕೆ ಕೊಟ್ಟಿದ್ದು, ಅಕ್ರಮ ನಡೆದಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯಾಧಾರ ಲಭ್ಯವಾಗಿದೆ. ಇನ್ನೂ ಕೆಲ ದಾಖಲಾತಿಗಳ ಅಗತ್ಯವಿರುವುದರಿಂದ ಆರ್‌ಟಿಒ ಅಧಿಕಾರಿ ಮತ್ತು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿರುವ ವಿಶೇಷ ತಂಡ ಕರ್ನಾಟಕಕ್ಕೆ ವಾಪಸ್ಸಾಗಿದೆ.
ಕೋಲಾರ ಕಚೇರಿಯಲ್ಲೇ 95 ಬಸ್ಸುಗಳು ಅಕ್ರಮವಾಗಿ ನೋಂದಣಿಯಾಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಬಸ್‌ಗಳಿಗೆ ಅರುಣಾಚಲ ಪ್ರದೇಶ ಆರ್‌ಟಿಒದಿಂದ ಎನ್‌ಒಸಿ ಬಂದ ಹಿನ್ನೆಲೆಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಸಬ್ ಇನ್‌ಸ್ಪೆಕ್ಟರ್, ಒಬ್ಬರು ಎಎಸ್‌ಐ ಮತ್ತು ಸಿಬ್ಬಂದಿ ಒಳಗೊಂಡ ತಂಡ ಅರುಣಾಚಲ ಪ್ರದೇಶಕ್ಕೆ ತೆರಳಿ ಅಲ್ಲಿನ ಆರ್‌ಟಿಒ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ವಾಪಸ್ಸಾಗಿದೆ.
ಅರುಣಾಚಲ ಪ್ರದೇಶದ ಆರ್‌ಟಿಒ ಕಚೇರಿಯಿಂದ ವಾಹನ್ 4ರಲ್ಲಿ ಅಪ್‌ಲೋಡ್ ಆಗಿದ್ದ ವಾಹನಗಳ ಎನ್‌ಒಸಿಗೆ ಸಂಬಂಧಿಸಿದಂತೆ ಪೂರ್ಣಪ್ರಮಾಣದಲ್ಲಿ ದಾಖಲಾತಿಗಳನ್ನು ಕೊಟ್ಟಿಲ್ಲ. ಆದರೆ, ಈಗ ಕೊಟ್ಟಿರುವ ದಾಖಲಾತಿಗಳಲ್ಲಿ ಕೋಲಾರ ಆರ್‌ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನಷ್ಟು ದಾಖಲಾತಿಗಾಗಿ ನೋಟಿಸ್ ಕೊಡಲಾಗಿದೆ. ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿ ಮಾಡಿದ್ದು ಹಾಗೂ ಬೇರೆಡೆಗೆ ಎನ್‌ಒಸಿ ಕೊಟ್ಟಿರುವುದು ಕೋಲಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ 9 ಬ್ರೇಕ್ ಇನ್‌ಸ್ಪೆಕ್ಟರ್‌ಗಳ ಹೆಸರುಗಳು ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಈಗಾಗಲೇ ಕೆಲ ಇನ್‌ಸ್ಪೆಕ್ಟರ್‌ಗಳನ್ನು ವಿಚಾರಣೆ ಮಾಡಲಾಗಿದೆ. ಗುರುವಾರ ಇಬ್ಬರು ಇನ್‌ಸ್ಪೆಕ್ಟರ್‌ಗಳಿಗೆ ವಿಚಾರಣೆಗೆ ಬರಲು ಸೂಚಿಸಲಾಗಿತ್ತು. ಆದರೆ, ಸಂಜೆ 5 ಗಂಟೆಗೆ ಬರಲು ಹೇಳಿದ್ದರಿಂದ ವಿಚಾರಣೆ ಮಾಡಲಾಗಿಲ್ಲ. ಅಕ್ರಮ ನೋಂದಣಿಯಲ್ಲಿ ಭಾಗಿಯಾದ ಆರೋಪ ಹಾಗೂ ಹಲವಾರು ವರ್ಷಗಳಿಂದ ಒಂದೇ ಕಚೇರಿಯಲ್ಲಿ ತಳವೂರಿದ್ದ ಪ್ರಥಮ ದರ್ಜೆ ಸಹಾಯಕ ಜೆ.ವಿ.ಶ್ರೀನಿವಾಸ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಪ್ರಕಾಶ್ ಅವರನ್ನು ಕಚೇರಿಯಿಂದ ಬಿಡುಗಡೆಗೊಳಿಸಲಾಗಿದೆ.
ಅಕ್ರಮ ನೋಂದಣಿ ದಂಧೆಯಲ್ಲಿ ಆರ್‌ಟಿಒ ಕಚೇರಿ ಜತೆ ಸಂಪರ್ಕ ಹೊಂದಿರುವ ಖಾಸಗಿ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮೋಟಾರು ವಾಹನ ನಿರೀಕ್ಷಕರ ಆಪ್ತ ಸಹಾಯಕನಾಗಿ ಗುರುತಿಸಿಕೊಂಡಿರುವ ಮಂಜು ಹಾಗೂ ಆರ್‌ಟಿಒ ಕಚೇರಿ ಬಳಿ ಜ್ಹೆರಾಕ್ಸ್ ಅಂಗಡಿ ಇಟ್ಟುಕೊಂಡಿರುವ, ಖಾಸಗಿ ಬಸ್ ಮಾಲೀಕ ರಾಜು ಎಂಬುವರ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು, ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಬಂಧಿತ ಆರ್‌ಟಿಒ ಏಜೆಂಟ್ ನವೀನ್‌ನ ಜತೆ ಇವರ ಸಂಪರ್ಕವಿತ್ತು ಎನ್ನಲಾಗಿದೆ. ಬಸ್‌ಗಳ ಜತೆಗೆ 6 ತಿಂಗಳಲ್ಲಿ 750ಕ್ಕೂ ಹೆಚ್ಚು ಗೂಡ್ಸ್ ವಾಹನಗಳನ್ನು ಅಕ್ರಮವಾಗಿ ನೋಂದಣಿಯಾಗಿರುವುದಕ್ಕೆ ದಾಖಲಾತಿಗಳಿವೆ.