ಕೋಲಾರ ನಗರಸಭೆ ಕಚೇರಿ 
ನ್ಯೂಸ್

ಕೋಲಾರ ನಗರಸಭೆ ಗದ್ದುಗೆಗೆ ಕೈ ಕಸರತ್ತು!

ಕಿರುವಾರ ಎಸ್​.ಸುದರ್ಶನ್​ ಕೋಲಾರ
ಕೋಲಾರ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್​ ತೀವ್ರ ಕಸರತ್ತು ನಡೆಸುತ್ತಿದೆ.

ಅಧ್ಯಕ್ಷ ಸ್ಥಾನ ಬಿಸಿಎಂ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ (ಮಹಿಳೆ)ಗೆ ಮೀಸಲಾತಿ ನಿಗದಿಯಾದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿಗಳಾದ ನಜೀರ್​ ಅಹ್ಮದ್​, ಅನಿಲ್​ಕುಮಾರ್​ ಕಸರತ್ತು ಆರಂಭಿಸಿದ್ದಾರೆ.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಜೆಡಿಎಸ್​ 8, ಪಕ್ಷೇತರ 8, ಎಸ್​ಡಿಪಿಐ 4 ಹಾಗೂ ಕಾಂಗ್ರೆಸ್​ 12 ಹಾಗೂ ಬಿಜೆಪಿಯ 3 ಸದಸ್ಯರಿದ್ದಾರೆ. ಜೆಡಿಎಸ್​, ಎಸ್​ಡಿಪಿಐ ಹಾಗೂ ಪಕ್ಷೇತರ ಮೈತ್ರಿಯಲ್ಲಿ ಜೆಡಿಎಸ್​ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಶ್ವೇತಾ ಶಬರೀಶ್​ ಹಾಗೂ ಉಪಾಧ್ಯಕ್ಷರಾಗಿ ಪ್ರವಿಣ್​ಗೌಡ ಅಧಿಕಾರದಲ್ಲಿದ್ದರು.
ವಿಧಾನಸಭೆ ಚುನಾವಣೆಯ ನಂತರ ಹಲವು ಸದಸ್ಯರು ಪಾಂತರ ಮಾಡಿದ್ದು, ರಾಜಕೀಯ ಚಿತ್ರಣವೇ ಬದಲಾಗಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್​ ತೀವ್ರ ಲಾಬಿ ನಡೆಸುತ್ತಿದೆ.
ಜೆಡಿಎಸ್​ ಸಂಸದ ಎಂ.ಮಲ್ಲೇಶ್​ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು ಹಾಗೂ ಕಾಂಗ್ರೆಸ್​ ಶಾಸಕ ಕೊತ್ತೂರು ಜಿ.ಮಂಜುನಾಥ್​ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್​ ಅಹ್ಮದ್​ ಸೇರಿ ಒಟ್ಟು 39 ಮತಗಳು ಇವೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ 18 ಕೋರಂ ಬೇಕಿದ್ದು, ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದು ಕುತೂಹಲ ಹೆಚ್ಚಿಸಿದೆ.

  • ಸದಸ್ಯರ ಪಕ್ಷಾಂತರ
    ಜೆಡಿಎಸ್​ನ 8 ಮಂದಿ ಸದಸ್ಯರ ಪೈಕಿ ಉಪಾಧ್ಯಕ್ಷರಾಗಿದ್ದ ಪ್ರವಿಣ್​ಗೌಡ ಬಿಜೆಪಿ ಹಾಗೂ ಸೂರಿ, ರಫಿ, ಎಜಾಜ್​ ಅವರು ಹಾಲಿ ಶಾಸಕರೊಂದಿಗೆ ಗುರುತಿಸಿಕೊಂಡಿದ್ದಾರೆ. ಇದರ ನಡುವೆ ಕಾಂಗ್ರೆಸ್​ ಸದಸ್ಯರಲ್ಲೂ ಎರಡ್ಮೂರು ಗುಂಪುಗಳಿವೆ. ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್​ ಅಧ್ಯಕ್ಷ ಸ್ಥಾನದ ಪ್ರಬಲ ಅಕಾಂಕ್ಷಿಯಾಗಿದ್ದು, ಎಂಎಲ್ಸಿ ನಜೀರ್​ ಅಹ್ಮದ್​ ಬೆಂಬಲ ಕೋರಿದ್ದಾರೆ ಎನ್ನಲಾಗುತ್ತಿದೆ. ಪಕ್ಷೇತರರಲ್ಲಿ ಮಾಜಿ ಸಚಿವ ಆರ್​.ವರ್ತೂರು ಪ್ರಕಾಶ್​ ಬೆಂಬಲಿಗ ಇಬ್ಬರು ಹಾಗೂ ಬಿಜೆಪಿಯ ಮೂವರು ಸದಸ್ಯರಿದ್ದಾರೆ. ಆದರೆ ಮೈತ್ರಿ ಪಕ್ಷಗಳು ಚುನಾವಣೆ ಕುರಿತು ಸದಸ್ಯರನ್ನು ಕರೆಯಿಸಿ ಚರ್ಚಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲಿದ್ದಾರೆ.
  • ದಿಕ್ಕು ತಪ್ಪಿದ ಜೆಡಿಎಸ್​
    ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಶ್ವೇತಾ ಅವರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಆಸಕ್ತಿ ತೋರುತ್ತಿಲ್ಲ. ಇದರ ನಡುವೆ ಮಾಜಿ ಅಧ್ಯಕ್ಷ ಮುಬಾರಕ್​ ಅವರೊಂದಿಗೆ ಗುರುತಿಸಿಕೊಂಡಿರುವುದರಿಂದ ಜೆಡಿಎಸ್​ಗೆ ಬೆಂಬಲ ಸೂಚಿಸುವುದು ಅನುಮಾನವಾಗಿದೆ. ಪರಿಸ್ಥಿತಿ ಹೀಗಿದ್ದರೂ ಜೆಡಿಎಸ್​ ತಾಲೂಕು ಅಧ್ಯಕ್ಷ ಬಾಬುಮೌನಿ ಅಥವಾ ಪಕ್ಷದ ಪದಾಧಿಕಾರಿಗಳು ಸದಸ್ಯರನ್ನು ಕರೆಯಿಸಿ ಚರ್ಚೆ ನಡೆಸಿಲ್ಲ. ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಹಲವರು ಜೆಡಿಎಸ್​ ಬಿಟ್ಟು ದಿಕ್ಕಾಪಾಲಾಗಿದ್ದಾರೆ. ಪಕ್ಷದ ನಿಷ್ಠರಾಗಿರುವ ರಾಕೇಶ್​ಗೌಡ ಅವರು ಸಂಸದ ಎಂ.ಮಲ್ಲೇಶ್​ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು ಅವರ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎನ್ನಲಾಗಿದೆ.
  • ಕೈಗೆ ಪ್ರತಿಷ್ಠೆ
    ಕಾಂಗ್ರೆಸ್​ನಿಂದ 12 ಮಂದಿ ಗೆದ್ದಿದ್ದರೆ, ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​ನ ನಾಲ್ವರು ಹಾಗೂ ಬಿಜೆಪಿಯ ಒಬ್ಬರು ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಕೈ ಸಂಖ್ಯಾಬಲ 15ಕ್ಕೆ ಏರಿಕೆಯಾಗಿದ್ದು, ಶಾಸಕ ಹಾಗೂ ಎಂಎಲ್ಸಿ ತಲಾ ಮತ ಇರುವುದರಿಂದ 17 ಆಗುತ್ತದೆ, ಇವರ ಗೆಲುವಿಗೆ ಒಂದು ಮತಬೇಕಾಗಿದ್ದು, ಪಕ್ಷೇತರ ಹಾಗೂ ಎಸ್​ಡಿಪಿಐ ಸದಸ್ಯರನ್ನು ಸೆಳೆಯಲು ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಿವೆ. ಆದಾಗ್ಯೂ ಕೈ ಸದಸ್ಯರಲ್ಲೆ ಗುಂಪುಗಾರಿಕೆ ಇರುವುದರಿಂದ ಕೆಲವರು ಬಂಡಾಯ ಸಾರುವ ಸಾಧ್ಯತೆಯಿದೆ. ಅದರಲ್ಲೂ ರಮೇಶ್​, ಅಪ್ಸರ್​, ಬಿ.ಎಂ.ಮುಬಾರಕ್​, ನಜೀಯಾ ತಾಜ್​ ಪ್ರಬಲ ಆಕಾಂಗಳಾಗಿದ್ದು, ಪಕ್ಷದ ಶಾಸಕ ಕೊತ್ತೂರು ಜಿ.ಮಂಜನಾಥ್​, ಎಂಎಲ್ಸಿಗಳಾದ ನಜೀರ್​ ಅಹ್ಮದ್​, ಎಂ.ಎಲ್​.ಅನಿಲ್​ಕುಮಾರ್​ ಅವರು ಎರಡು ಸ್ಥಾನಕ್ಕೆ ಯಾರನ್ನು ಸೂಚಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿ ಇರುವುದರಿಂದ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಾಂಗ್ರೆಸ್​ಗೆ ಪ್ರತಿಷ್ಠೆಯಾಗಿದೆ.
  • ಮೌನಕ್ಕೆ ಜಾರಿದ ದೋಸ್ತಿಗಳು
    ಸಂಸತ್​ ಚುನಾವಣೆಯಲ್ಲಿ ಮೈತ್ರಿಯಾಗಿದ್ದ ಬಿಜೆಪಿ&ಜೆಡಿಎಸ್​ ಮುಖಂಡರು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯನ್ನು ಇನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಜೆಡಿಎಸ್​ ಹಾಗೂ ಬಿಜೆಪಿ ಸದಸ್ಯರು ಅತಂತ್ರವಾಗಿದ್ದಾರೆ.
    ವಾರದ ಹಿಂದೆಯೇ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದು, ಇನ್ನು ಕೆಲವೇ ದಿನಗಳು ಚುನಾವಣೆಗೆ ಬಾಕಿಯಿದೆ. ಇದುವರೆಗೂ ಜೆಡಿಎಸ್​-ಬಿಜೆಪಿ ಮುಖಂಡರು ಇತ್ತ ತಲೆ ಹಾಕದೆ ಇರುವುದರಿಂದ ಮೌನಕ್ಕೆ ಒಳಗಾಗಿದ್ದಾರೆಯೇ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ.