ನ್ಯೂಸ್

ಕೋಲಾರ ಎಪಿಎಂಸಿ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ:

Kolar

ಕೋಲಾರ : ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ, ವರ್ತೂರು ಬೆಂಬಲಿತ, ಜೆಡಿಎಸ್ ಬಂಡಾಯ ಅಭ್ಯರ್ಥಿ ಸಿ.ಎಂ.ಮಂಜುನಾಥ್ ಗೆಲುವು ಸಾಧಿಸಿದ್ದು, ಶಾಸಕ ಶ್ರೀನಿವಾಸಗೌಡ ಮುಖಭಂಗ ಅನುಭವಿಸಿದ್ದಾರೆ.

ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ನರಸಾಪುರ ಕ್ಷೇತ್ರದಿಂದ ಜೆಡಿಎಸ್‌ನ ಮಂಜುನಾಥ್ ಬಿಜೆಪಿಯ ನಾಮಕರಣ ಸದಸ್ಯರ ಬೆಂಬಲ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಬಣದ ಸದಸ್ಯರ ಬೆಂಬಲದಿಂದ 12 ಮತ ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು.

ನಿಗದಿಯಂತೆ ಎಪಿಎಂಸಿ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. ಮೂವರು ನಾಮಕರಣ ಸದಸ್ಯರು ಸೇರಿ ಒಟ್ಟು 16 ಸದಸ್ಯ ಬಲದ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಸದಸ್ಯ ಸಿ.ಎಂ.ಮಂಜುನಾಥ್, ರೇಖಾ ದಯಾನಂದ್ ಹಾಗೂ ರವಿಶಂಕರ್ ನಾಮಪತ್ರ ಸಲ್ಲಿಸಿದರು.

ಹಿಂದಿನ ಒಳ ಒಪ್ಪಂದದಂತೆ ತಮಗೆ ಅವಕಾಶ ಬಿಟ್ಟುಕೊಡುವಂತೆ ರೇಖಾ ದಯಾನಂದ್ ಮನವಿ ಮಾಡಿದಾಗ ರವಿಶಂಕರ್ ಉಮೇದುವಾರಿಕೆ ವಾಪಸ್ ಪಡೆಯಲು ಸಮ್ಮತಿಸಿದರಾದರೂ ಮಂಜುನಾಥ್ ಒಪ್ಪಲಿಲ್ಲ.

ಕಣದಲ್ಲಿ ಇಬ್ಬರು ಉಳಿದಿದ್ದರಿಂದ ಚುನಾವಣಾಧಿಕಾರಿಗಳಾಗಿದ್ದ ತಹಸೀಲ್ದಾರ್ ವಿಲಿಯಂ ಮತದಾನ ಪ್ರಕ್ರಿಯೆ

ಕೈಗೆತ್ತಿಕೊಂಡರು. ರಹಸ್ಯ ಮತದಾನ ನಡೆದು ಮತ ಎಣಿಕೆಯಾದಾಗ ಮಂಜುನಾಥ್ 16 ಮತ ಪಡೆದು ಚುನಾಯಿತರಾದರೆ ಎದುರಾಳಿ ರೇಖಾ ದಯಾನಂದ್ 4 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಈ ಹಿಂದೆ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನ ವಡಗೂರು ನಾಗರಾಜ್ ಸ್ಪರ್ಧಿಸಿದ್ದಾಗ ಶಾಸಕ ಕೆ.ಶ್ರೀನಿವಾಸಗೌಡ ಬೆಂಬಲಿಸದೆ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು. ಲಾಟರಿಯಲ್ಲಿ ನಾಗರಾಜ್‌ಗೆ ಅದೃಷ್ಟ ಒಲಿಯಿತು. ನಂತರದ ದಿನಗಳಲ್ಲಿ ಶಾಸಕರಿಂದ ಅಂತರ ಕಾಯ್ದುಕೊಂಡಿದ್ದರು. ಬೀಜ ನಿಗಮದ ನಿರ್ದೇಶಕರ ಚುನಾವಣೆಗೆ ವಡಗೂರು ಸ್ಪರ್ಧಿಸಿದ್ದಾಗ ಶಾಸಕರಿಂದ ಸಹಕಾರ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶ್ರೀನಿವಾಸಗೌಡರು ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸದೆ ಮುಯ್ಯಿ ತೀರಿಸಿಕೊಂಡಿದ್ದಾರೆ.

ಇದರೊಂದಿಗೆ ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಕೂಡ ಕೈ ಜೋಡಿಸಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಮಂಜುನಾಥ್ ಬೆಂಬಲಕ್ಕೆ ನಿಂತರು. ಸದಸ್ಯೆ ರೇಖಾ ಅವರ ಪತಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಶಾಸಕ ಕೆ. ಶ್ರೀನಿವಾಸಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜತೆ ಗುರುತಿಸಿಕೊಂಡಿದ್ದಾರೆ. ರೇಖಾ ದಯಾನಂದ್ ಅವರನ್ನು ಸೋಲಿಸಿದರೆ ಶಾಸಕ ಶ್ರೀನಿವಾಸಗೌಡ ಇತರರಿಗೆ ಮುಖಭಂಗ ಆದಂತಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆ ಮುನ್ನಾ ದಿನದವರೆಗೆ ಬೆಂಬಲ ಸೂಚಿಸಿ ಚುನಾವಣೆ ಸಂದರ್ಭದಲ್ಲಿ ಕೈ ಕೊಟ್ಟರು ಎನ್ನಲಾಗಿದೆ.

ಸಿಎಂ ಸೂಚನೆ ಹಿನ್ನೆಲೆಯಲ್ಲಿ ತಹಸೀಲ್ದಾರ್, ಎಪಿಎಂಸಿ ಅಧಿಕಾರಿಗಳು ನೂತನ ಅಧ್ಯಕ್ಷರ ಆಯ್ಕೆ ನಂತರ ಮಾಲಾರ್ಪಣೆ ಮಾಡದೆ ಕೈ ಮುಗಿದು ಶುಭಕೋರಿದರೆ, ಹೊರಗಡೆ ಬೆಂಬಲಿಗರು ಹೂವಿನ ಹಾರ ಹಾಕಿ ಸಂಭ್ರಮಿಸಿದ್ದು ಕಂಡುಬಂತು.

ಕರೆ ಸ್ವೀಕರಿಸದ ಸಂಸದ : ಎಪಿಎಂಸಿಯಲ್ಲಿ ಮೂವರು ಬಿಜೆಪಿ ನಾಮ ನಿರ್ದೇಶಕರ ಬೆಂಬಲ ಕೊಡಿಸುವಂತೆ ಶಾಸಕ ಶ್ರೀನಿವಾಸಗೌಡ ಕರೆ ಮಾಡಿದರೂ ಗೋವಾದಲ್ಲಿ ನಡೆದ ಕಲ್ಲಿದ್ದಲು ಮತ್ತು ಕಬ್ಬಿಣ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಎಸ್.ಮುನಿಸ್ವಾಮಿ ಕರೆ ಸ್ವೀಕರಿಸಲಿಲ್ಲ. ಡಿಸಿಸಿ ಬ್ಯಾಂಕ್‌ನಿಂದ ನಡೆಯುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ಕಡೆಗಣಿಸುತ್ತಿರುವವರಿಗೆ ಈ ಮೂಲಕ ಉತ್ತರ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ಇಂಚರ ಗೋವಿಂದರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್ ಸೇರಿ ಪಕ್ಷಾತೀತವಾಗಿ ಬೆಂಬಲ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಉಳಿದಿರುವ 5 ತಿಂಗಳ ಅವಧಿಯಲ್ಲಿ ಎಪಿಎಂಸಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಹೊಸ ಮಾರುಕಟ್ಟೆ ನಿರ್ಮಾಣ, ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಸಿ.ಎಂ.ಮಂಜುನಾಥ್, ಅಧ್ಯಕ್ಷ, ಎಪಿಎಂಸಿ ಫೋಟೋ: 17-ಕೆಎಲ್‌ಆರ್-3