ನ್ಯೂಸ್

ಬೆಳೆಯೆಲ್ಲಾ ಮಳೆಗೆ ಕೊಚ್ಚಿ ಹೋಯ್ತು...: ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ರೈತರ ಅಳಲು

Kolar

ಕೋಲಾರ: ನಾನು ಹಸು ಮಾರಿ ರಾಗಿ ಬೆಳೆ ಬೆಳೆದಿದ್ದೆ. ಮಳೆಯಿಂದ ಎಲ್ಲವೂ ಮೊಳಕೆ ಬಂದುಬಿಟ್ಟಿದೆ, ತಿನ್ನೋದಕ್ಕೂ ಆಗಲ್ಲ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟೊಮ್ಯಾಟೊ, ಹೂವು, ಸೌತೆಕಾಯಿ ಬೆಳೆ ಇಟ್ಟಿದ್ವಿ. ಎಲ್ಲವೂ ನೀರು ಪಾಲಾಯಿತು, ಏನಾದ್ರೂ ಮಾಡಿ ಪರಿಹಾರ ಕೊಡಿಸಿ’

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆಗಳ ನಾಶ, ಮನೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ನಷ್ಟ ವೀಕ್ಷಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಳಿ ರೈತರು ಅಲವತ್ತುಕೊಂಡ ಪರಿ ಇದು.

ತಾಲೂಕಿನ ನರಸಾಪುರ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದ ರೈತ ಮುನಿಯಪ್ಪ ಅವರಿಗೆ ಸೇರಿದ 1 ಎಕರೆ ಆಲೂಗಡ್ಡೆ ಬೆಳೆ ಹಾಗೂ ಮುನಿರಾಜು ಎಂಬುವವರ ಟೊಮ್ಯಾಟೊ ಬೆಳೆ ನಾಶವಾಗಿರುವುದನ್ನು ವೀಕ್ಷಿಸಿದರು. ಬಳಿಕ ಖಾಜಿಕಲ್ಲಹಳ್ಳಿಯ ರೈತ ಮುನಿರಾಜು ತೋಟಕ್ಕೆ ಭೇಟಿ ನೀಡಿ 6 ಎಕರೆಯಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪು ಬೆಳೆ ಹಾನಿ ವೀಕ್ಷಣೆ, ಅಲ್ಲಿಂದ ನಾಗಾಲಾಪುರದಲ್ಲಿ ಮುದ್ದುರಾಜ್ ಎಂಬುವರ 4 ಎಕರೆ ರಾಗಿ ಹೊಲ, ನಾರಾಯಣಸ್ವಾಮಿ ಬೆಳೆದಿದ್ದ ಸೇವಂತಿಗೆ ಹೂವಿನ ತೋಟ ಮತ್ತು ನಾಗರಾಜ್ ಅವರ 1 ಎಕರೆ ಟೊಮ್ಯಾಟೊ ತೋಟ ಹಾನಿಗೀಡಾಗಿರುವುದನ್ನು ವೀಕ್ಷಿಸಿದರು.

ಯಾರಾದ್ರೂ ಬಂದಿದ್ರೇನಯ್ಯ... : ‘ಬೆಳೆ ಹಾನಿ ಬಗ್ಗೆ ಸರ್ವೇ ನಡೆಸಲು ಅಧಿಕಾರಿಗಳು ಯಾರಾದ್ರೂ ಬಂದಿದ್ರೇನಯ್ಯ.....’ ಎಂದು ಸಿದ್ದರಾಮಯ್ಯ ರೈತರನ್ನು ಪ್ರಶ್ನಿಸಿದಾಗ ಅಲವತ್ತುಕೊಂಡ ನಾಗರಾಪುರದ ರೈತ ಮುದ್ದುರಾಜ್ ‘ನಾನು ಹಸು ಮಾರಿ ರಾಗಿ ಬೆಳೆದಿದ್ದೆ, ಚೆನ್ನಾಗಿ ಇಳುವರಿ ಬಂದಿತ್ತು, ಕಟಾವು ಮಾಡುವಷ್ಟರಲ್ಲಿ ಮಳೆಗೆ ಕಾಳು ತೆನೆಯಲ್ಲೇ ಮೊಳಕೆ ಒಡೆದಿದೆ. ಸರ್ವೇ ಮಾಡಿದ 24 ಗಂಟೆಯಲ್ಲಿ ಪರಿಹಾರ ನೀಡ್ತೀವಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೋಲಾರಕ್ಕೆ ಬಂದಾಗ ಹೇಳಿದ್ರು, ಸರ್ವೇ ಮಾಡಲು ಒಬ್ಬ ಅಧಿಕಾರಿಯೂ ನಮ್ಮ ತೋಟಗಳಿಗೆ ಬಂದಿಲ್ಲ’ ಎಂದು ದೂರಿದರು.

ಮತ್ತೊಬ್ಬ ರೈತ ತನ್ನ ಮನೆ ಬಿದ್ದುಹೋಗಿದ್ದರೂ ಸರ್ವೇ ಮಾಡಲು ಬಂದಿಲ್ಲ ಎಂದು ಮಳೆಗೆ ಬಿದ್ದುಹೋಗಿರುವ ಮನೆಯ ಫೋಟೋವನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿ ಕಷ್ಟ ಹೇಳಿಕೊಂಡರಲ್ಲದೆ ನಷ್ಟ ಪರಿಹಾರ ಕೊಡಿಸಿ ಎಂದು ಕೈ ಮುಗಿದು ಕೇಳಿಕೊಂಡರು.

ನಷ್ಟದ ಸರ್ವೇ ಮಾಡದೆ ಪರಿಹಾರ ನೀಡಲು ಬರುವುದಿಲ್ಲ, ಕೂಡಲೇ ಸರ್ವೇ ಮಾಡಿ ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ಸಿದ್ದರಾಮಯ್ಯ ಸಮಾಧಾನಪಡಿಸಿ ಮುಂದೆ ಸಾಗಿದರು.

ರೈತರು ಅಳಲು ತೋಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಜತೆಗಿದ್ದ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರ ಮುಖದಲ್ಲಿ ದುಃಖ ಮಡುಗಟ್ಟಿದ್ದು ಕಂಡುಬಂತು. ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಎಂಎಲ್‌ಸಿ ನಜೀರ್ ಅಹಮದ್, ಅಂಜನಿ ಸೋಮಣ್ಣ, ಮಣಿಘಟ್ಟ ಸೊಣ್ಣೇಗೌಡ ಸೇರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.