ನ್ಯೂಸ್

ರಾಜಕೀಯ ವ್ಯವಹಾರ ಏನೇ ಇರಲಿ, ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಿ

Kolar

ಕೋಲಾರ: ನಿಮ್ಮ ರಾಜಕೀಯ ವ್ಯವಹಾರ ಏನೇ ಇರಲಿ, ಸಮಸ್ಯೆ ಹೇಳಿಕೊಂಡು ಬರುವ ಸಾಮಾನ್ಯ ಕಾರ್ಯಕರ್ತರಿಗೆ ಸಬೂಬು ಹೇಳದೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಪಾರ್ಥಸಾರಥಿ ಸಂಸದ ಮುನಿಸ್ವಾಮಿಗೆ ಸೂಚ್ಯವಾಗಿ ಸಲಹೆ ನೀಡಿದರು.

ನಗರದ ಪಾಲಸಂದ್ರ ಲೇಔಟ್ ನವನಳಂದ ಶಾಲೆ ಆವರಣದಲ್ಲಿ ಡಿವಿಜಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಪರಿವ್ರಾಜಕ ಪಾರ್ಥ ಪುಸ್ತಕ’ ಬಿಡುಗಡೆ ಸಮಾರಂಭ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ದಶಕಗಳವರೆಗೆ ಜಿಲ್ಲೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಇಲ್ಲದೆಯೇ ಪಕ್ಷ ಸಂಘಟಿಸಿ ಬೆಳೆಸಿದ್ದೇವೆ. ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ, ತ್ಯಾಗ ಮಾಡಿದ್ದಾರೆ ಎಂಬುದು ನೆನಪಿರಲಿ ಎಂದರು.

ಜಿಲ್ಲೆಯಲ್ಲಿ ಪ್ರತಿಪಕ್ಷಗಳಿಂದಾಗಿ ಅನೇಕರು ಸಾಕಷ್ಟು ನೋವುಂಡವರು, ಜೈಲು ನೋಡಿದವರಿದ್ದಾರೆ. ಇಷ್ಟು ದಿನ ನಮ್ಮನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಈಗ ನಮ್ಮ ಪಕ್ಷದವರೇ ಸಂಸದರಿದ್ದೀರಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಸಮಸ್ಯೆ ಹೇಳಿಕೊಂಡು ಬಂದಾಗ ಶಾಸಕರು ಹೇಳಬೇಕು, ಅವರನ್ನು ಭೇಟಿಯಾಗು ಎಂದು ಸಬೂಬು ಹೇಳದೆ ಸ್ಪಂದಿಸಬೇಕು. ಮನಸ್ಸಿಗೆ ನೋವಾಗದ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ಸೂಕ್ಷ್ಮವಾಗಿ ನುಡಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಷ್ಟ್ರೀಯತೆ ಮತ್ತು ಹಿಂದುತ್ವದ ಸಂಘಟನೆಯಲ್ಲಿ ಪಾರ್ಥಸಾರಥಿ ಯಾವುದೇ ಸ್ವಾರ್ಥ, ಫಲಾಪೇಕ್ಷೆ ಇಲ್ಲದೆ ಪಕ್ಷ ಕಟ್ಟಿದ್ದಾರೆ. ಕೋಲಾರದಲ್ಲಿ ಕೆಲವರ ಸಾಧನೆಗಳು ಜೀರೋ ಅಗಿದ್ದರೂ ಬೆಂಗಳೂರಿನ ಸಚಿವರ ಮನೆ ಮುಂದೆ ಹೀರೋಗಳಂತೆ ಫೋಸ್ ಕೊಡುವ ಮಂದಿ ಹೆಚ್ಚಾಗಿದ್ದಾರೆ. ಅಂಥವರಿಗೆ ನಮ್ಮ ಪಾರ್ಥಣ್ಣ ಅವರ ಸರಳತೆ, ಸಜ್ಜನಿಕೆಯ ಗುಣಗಳು ಪಾಠವಾಗಿದೆ ಎಂದರು.

ಪಾರ್ಥಣ್ಣನ ಮಾದರಿಯಲ್ಲಿ ನಾವೆಲ್ಲರೂ ಇತಿಹಾಸದಲ್ಲಿ ಉಳಿಯುವ ಕೆಲಸವಾಗಬೇಕು. ಪಾರ್ಥಸಾರಥಿ ಅವರ ಪುತ್ಥಳಿ ಸ್ಥಾಪಿಸಿ ಅವರಿಂದಲೇ ಉದ್ಘಾಟಿಸುವ ಹಾಗೂ ನಗರದ ರಸ್ತೆಗೆ ಅವರ ಹೆಸರಿನ್ನಿಡಬೇಕೆಂದು ಆಶಯ ವ್ಯಕ್ತಪಡಿಸಿದರು.

ಪರಿವಾರದ ಪ್ರಚಾರಕ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಜನಸಂಘ, ವಿಶ್ವ ಹಿಂದು ಪರಿಷತ್ ಹೀಗೆ ಎಲ್ಲ ಪರಿವಾರ ಸಂಘಟನೆಗಳ ಹಿಂದೆ ಪಾರ್ಥಸಾರಥಿ ಇದ್ದಾರೆ. ಬಿಜೆಪಿಯನ್ನೂ ಅಖಂಡ ಕೋಲಾರ ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಬೆಳೆಸಿದ್ದಾರೆ ಎಂದು ಸ್ಮರಿಸಿದರು.

ಪಾರ್ಥ ಸಾರಥಿ ಅವರು ಕಾವಿ ಬಟ್ಟೆ ತೊಡದ ಸಂನ್ಯಾಸಿಯಾಗಿ, ಸದಾ ಸಂಚಾರಿಯಾಗಿ ತೆರೆಮರೆಯಲ್ಲಿದ್ದು ವ್ಯಕ್ತಿಗಿಂತ ಒಂದು ಶಕ್ತಿಯಾಗಿದ್ದಾರೆ. ಇಂದು ಸಮಾಜದಲ್ಲಿ ದುರ್ಯೋಧನರ ಸಂಖ್ಯೆ ಹೆಚ್ಚಿರುವಾಗ ಧರ್ಮರಾಯನ ಗುಣಗಳನ್ನು ಅಳವಡಿಸಿಕೊಂಡು ಪಾರ್ಥನಾ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದು ಅರಿವಳಿಕೆ ತಜ್ಞ ಡಾ. ವಸಂತ ಕುಮಾರ್ ನುಡಿದರು.

ಆರ್‌ಎಸ್‌ಎಸ್ ವಿಭಾಗ ಸಂಘ ಚಾಲಕ ಡಾ.ಶಂಕರ್ ನಾಯಕ್ ಮಾತನಾಡಿ, ಪಾರ್ಥಸಾರಥಿ ಅವರು ಔಪಚಾರಿಕ ಬೈಠಕ್‌ಗಿಂತ ಅನೌಪಚಾರಿಕ ಬೈಠಕ್‌ಗೆ ಮಹತ್ವ ನೀಡಿದ್ದರಿಂದ ಪ್ರತಿ ಕಾರ್ಯಕರ್ತರಿಗೂ ಅವರ ವಿಶ್ವಾಸ, ಸ್ನೇಹ ಗಳಿಸಲು ಸಾಧ್ಯವಾಯಿತು. ಅಪರ ಪ್ರೇರಣೆಯಿಂದ ಹಿಂದು ಸಂಘಟನೆ ಕಾರ್ಯಕರ್ತರಾಗಿ ಬೆಳೆಯಲು ಸಾಧ್ಯವಾಯಿತು. ಮಾತೃ ಸಂಘಟನೆ ಬಲಪಡಿಸುವ ಅವಶ್ಯಕತೆ ಹೆಚ್ಚಿದೆ ಎಂದು ಪ್ರತಿಪಾದಿಸಿದರು.

ಡಿವಿಜಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಅಧ್ಯಕ್ಷರಾದ ಎಂ.ಲಕ್ಷ್ಮಯ್ಯ, ಎಸ್.ಎನ್.ಶ್ರೀರಾಮ್, ಪಿ.ಎಂ.ರಘುನಾಥ್, ವೈ.ಸುರೇಂದ್ರಗೌಡ, ಹಿರಿಯ ಮುಖಂಡ ಹನುಮಂತಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಚಿಂತಾಮಣಿಯ ಸತ್ಯನಾರಾಯಣ ಮಹೇಶ್, ಡಾ.ಶಿವಣ್ಣ, ಅಭಿಮಾನಿ ಬಳಗದ ಸಂಚಾಲಕರಾದ ನಂದೀಶ್, ಡಾ.ವಿವೇಕ ಶ್ರೀನಿವಾಸನ್, ವಿಜಯಕುಮಾರ್, ನಳಂದ ಶಾಲೆಯ ಮುಖ್ಯಸ್ಥ ಶ್ರೀನಿವಾಸ್, ಚಂದ್ರಪ್ರಕಾಶ್,ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ವಾಸುದೇವಮೂರ್ತಿ, ಜನಪದ ವಿವಿ ಸಿಂಡಿಕೇಟ್ ಸದಸ್ಯ ವಸಂತಕುಮಾರ್ ಸೇರಿ ಪಕ್ಷಾತೀತವಾಗಿ ಅನೇಕ ಮುಖಂಡರು ಭಾಗವಹಿಸಿದ್ದರು.

ಸಂಘಟನೆ ಮತ್ತು ನಾಯಕತ್ವ ಬೆಳೆಸುವ ಕಲೆಯನ್ನು ಪಾರ್ಥಸಾರಥಿ ಅವರಿಂದ ಕಲಿಯಬೇಕು. ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ತಿರಸ್ಕರಿಸಿದವರು. ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಪಕ್ಷದ ಸಂಘಟನೆಯಲ್ಲಿ ಸುಧಾರಣೆ ಸಾಧ್ಯ. ಸಚ್ಚಿದಾನಂದಮೂರ್ತಿ, ಅಧ್ಯಕ್ಷರು ಬ್ರಾಹ್ಮಣ ಅಭಿವೃದ್ಧಿ ನಿಗಮ