ಕೋಲಾರ: ಐದು ವರ್ಷಗಳ ಹಿಂದೆ 28 ಲಕ್ಷ ರೂ. ನಷ್ಟದಲ್ಲಿದ್ದ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ 2019-20ನೇ ಸಾಲಿನಲ್ಲಿ 37.32 ಲಕ್ಷ ನಿವ್ವಳ ಲಾಭಗಳಿಸಿ ಉತ್ತಮ ಸಾಧನೆ ತೋರಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
ತಾಲೂಕಿನ ಸುಗಟೂರು ಎಸ್‌ಎಫ್‌ಸಿಎಸ್‌ನಲ್ಲಿ ಶನಿವಾರ ನಡೆದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸೊಸೈಟಿಯ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು ಮತ್ತು ಮಹಿಳೆಯರಿಂದ ಸಾಲ ಮರುಪಾವತಿ ಅತ್ಯುತ್ತಮವಾಗಿದೆ. ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಮ್ಮುಖದಲ್ಲಿ ನ.25ರಂದು ಈ ಸೊಸೈಟಿ ಮೂಲಕ 36 ಮಹಿಳಾ ಸಂಘಗಳಿಗೆ 1.75 ಕೋಟಿ ಸಾಲ ವಿತರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ರೈತ, ಮಹಿಳೆಯರ, ಬಡವರ ಪರವಾಗಿ ನಿಂತು ಸಾಲ ಸೌಲಭ್ಯ ನೀಡುತ್ತಿರುವಾಗ ವಾಣಿಜ್ಯ ಬ್ಯಾಂಕ್‌ಗಳಲ್ಲಿ ನಮ್ಮ ಬ್ಯಾಂಕ್ ಗ್ರಾಹಕರು ಠೇವಣಿ ಇಡುವುದು ಶೋಭೆ ತರುವುದಿಲ್ಲ. ಡಿಸಿಸಿ ಬ್ಯಾಂಕಿನಲ್ಲೇ ಹಣಕಾಸು ವ್ಯವಹಾರ ನಡೆಸಿದರೆ ಬ್ಯಾಂಕ್ ಏಳಿಗೆ ಆಗುವುದರ ಜತೆಗೆ ತಾವೂ ಏಳಿಗೆ ಕಾಣಬಹುದು ಎಂದು ನುಡಿದರು.
ಸುಗಟೂರು ಗ್ರಾಮದಲ್ಲಿ ಸೊಸೈಟಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಗ್ರಾಹಕರು ಒತ್ತಾಯಿಸಿದಾಗ ಶಾಸಕ ರಮೇಶ್‌ಕುಮಾರ್ ಅನುದಾನ ಸೇರಿ ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಮಾತನಾಡಿ, ಸೊಸೈಟಿಯಿಂದ 411 ಮಂದಿಗೆ 4.60 ಕೋಟಿ ಸಾಲ ಮಂಜೂರು ಆಗಿದೆ. 460 ಮಹಿಳಾ ಸಂಘಗಳಿಗೆ 22 ಕೋಟಿ, 180 ರೈತರಿಗೆ ಬೆಳೆಸಾಲ 2.60 ಕೋಟಿ, 11 ರೈತರಿಗೆ ರೇಷ್ಮೆ ಮನೆ ನಿರ್ಮಾಣಕ್ಕೆ 80 ಲಕ್ಷ ರೂ. ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್, ಸೊಸೈಟಿಯ ಉಪಾಧ್ಯಕ್ಷೆ ರುಕ್ಮಣಿಯಮ್ಮ, ತೊಟ್ಲಿ ವೆಂಕಟರಾಮರೆಡ್ಡಿ, ಅಂಕತಟ್ಟಿ ಬಾಸ್ಕರ್‌ಬಾಬು, ಮಾಜಿ ಉಪಾಧ್ಯಕ್ಷ ಅಮರನಾರಾಯಣಸ್ವಾಮಿ, ತುರಂಡಹಳ್ಳಿ ವೆಂಕಟರಾಮಪ್ಪ, ಗೌಡಹಳ್ಳಿ ಡಿ.ಗೋಪಾಲಪ್ಪ, ಉಪ್ಪುಕುಂಟೆ ಎನ್.ಗೋಪಾಲಗೌಡ, ಶೆಟ್ಟಿಮಾದಮಂಗಲ ವೆಂಕಟಮ್ಮ, ಸವಿತಾ ನಾಗೇಶ್‌ಶೆಟ್ಟಿ, ಸೈಯದ್ ಸೀರಾಜ್, ಸೋಸೈಟಿ ಎಂ.ಡಿ.ಪುಟ್ಟರಾಜು ಇ.ಶ್ರೀನಿವಾಸ್, ವೆಂಕಟೇಶಪ್ಪ ಇದ್ದರು.