ನ್ಯೂಸ್

ಅರ್ಹರಿಗೆ ಸೌಲಭ್ಯದ ಅರಿವು ಮೂಡಿಸಿ

Kolar
ಕೋಲಾರ:  ಬಡತನ ನಿರ್ಮೂಲನೆಗೆ ಸರ್ಕಾರ ರೂಪಿಸಿರುವ ಯೋಜನೆಗಳ ಅರಿವಿಲ್ಲದೆ ಅರ್ಹರು ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾ.ಪವನೇಶ್.ಡಿ ಹೇಳಿದರು.
 ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಡತನ ನಿರ್ಮೂಲನೆ ಯೋಜನೆ ಕುರಿತು ಕಾನೂನು ಅರಿವು-ನೆರವು, ಕರೊನಾ ಜನಾಂದೋಲನ ಕಾರ್ಯಾಗಾರ ಹಾಗೂ ಭಾಷಾ ಸೌಹಾರ್ದತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 ಬಡತನ ನಿರ್ಮೂಲನೆ ಮಹತ್ಮಾ ಗಾಂಧಿ ಅವರ ಕನಸಾಗಿತ್ತು. ಇದಕ್ಕೆ ಪೂರಕವಾಗಿ ಸರ್ಕಾರಗಳು ಗರೀಬಿ ಹಠಾವೋ ಇನ್ನಿತರ ಕಾರ್ಯಕ್ರಮ ರೂಪಿಸಿದೆ. ಎಲ್ಲ ಇಲಾಖೆಯ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬಡವರು ಯಾವುದೇ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿ ಸೌಲಭ್ಯ ದಕ್ಕಿಸುವುದಾಗಿ ನುಡಿದರು.
 ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಸಿ.ಸತ್ಯಭಾಮ ಸ್ವಾತಂತ್ರ್ಯ ನಂತರ ಸರ್ಕಾರಗಳು ಪಂಚವಾರ್ಷಿಕ ಯೋಜನೆಗಳ ಮೂಲಕ ಬಡತನ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸುತ್ತಾ ಬಂದಿದೆ. ಕಾನೂನು ದೃಷ್ಠಿಯಲ್ಲಿ ಎಲ್ಲರೂ ಸಮಾನರು. ಆದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕಾರಣದಿಂದ ಬಡತನ ಮುಂದುವರಿದಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಬದ್ಧತೆಯಿಂದ ಕಾರ್ಯನಿರ್ವಹಿಸಿ ಅವಶ್ಯಕತೆಯುಳ್ಳ ವ್ಯಕ್ತಿಗೆ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ತಲುಪಿಸಿದರೆ ಸುಧಾರಣೆ ಸಾಧ್ಯ ಎಂದರು.
 ಕರೊನಾ ನಿಯಂತ್ರಣದಲ್ಲಿ ಎದುರಾದ ಸಂಕಷ್ಟ, ಸವಾಲುಗಳನ್ನು ಎದುರಿಸಿದ ಬಗೆ ವಿವರಿಸಿದ ಡಿಸಿ, ಪ್ರತಿನಿತ್ಯ ತಮ್ಮ ಸ್ಥಾನಕ್ಕೆ ಒಂದಲ್ಲಾ ಒಂದು ಆಪಾದನೆಗಳು ಬಂದವು. ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಕೆಲಸ ಮಾಡಿ ತೋರಿಸಿದ್ದೇವೆ. ಅಧಿಕಾರಿಗಳಲ್ಲಿ ಕೆಲವರಷ್ಟೇ ಕೆಲಸ ಮಾಡಿದ್ದಾರೆ. ಇನ್ನಾದರೂ ಮೈಗಳ್ಳತನ ಬೇಡ, ಚಳಿಬಿಟ್ಟು ಕೆಲಸ ಮಾಡಿ ಎಂದು ತಾಕೀತು ಮಾಡಿದರು.
 ಮಾಸ್ಕ್ ಧರಿಸದ ಪ್ರಕರಣಗಳಲ್ಲಿ ದಂಡ ವಿಧಿಸುತ್ತಿದ್ದರೂ ಜನರಲ್ಲಿ ಭಯವಿಲ್ಲ. ಕರೊನಾ ಎರಡನೇ ಅಲೆ ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೇಳಿದರು.
 ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ,  ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ವಕೀಲ ಕೆ.ವಿ.ಧನರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಉಪಸ್ಥಿತರಿದ್ದರು.
ಮಹಾಜನ್ ವರದಿ ಜಾರಿಗೊಳಿಸಿ: ಭಾಷಾ ಸೌಹಾರ್ದ ದಿನ ಬಗ್ಗೆ ವಿಚಾರ ಮಂಡಿಸಿದ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳ ನಡುವಿನ ಗಡಿ ಸಮಸ್ಯೆಗೆ ಮಹಾರಾಜನ್ ವರದಿ ಅನುಷ್ಠಾನಕ್ಕೆ ತಂದು ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು.
 ಬೆಳಗಾವಿ ಜಿಲ್ಲೆಯ ಕನ್ನಡಿಗರ ಮೇಲೆ ಭಾಷೆ ಹಾಗೂ ಮರಾಠರಿಂದ ವಿರೋಧ ಇಂದಿಗೂ ತಪ್ಪಿಲ್ಲ. ಕನ್ನಡಿಗರ ವಿರೋಧಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯಿದೆ. ದೇಶದಲ್ಲಿ ನೂರಾರು ಭಾಷೆಗಳಿವೆ. ಕನ್ನಡ, ಮರಾಠ, ತೆಲುಗು, ತಮಿಳು, ಮಲಯಾಳಂ ಇತರ ಭಾಷೆಗಳನ್ನು ಪ್ರೀತಿಸುವುದು, ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಯಾವುದೇ ಭಾಷಿಗರು ಸಹ ಭಾಷೆಯ ವಿಚಾರದಲ್ಲಿ ಭಂಗ ತರುವುದು ಬೇಡ. ಭಾಷಾ ಸಾಮರಸ್ಯ ದೇಶಕ್ಕೆ ಉತ್ತಮ ವ್ಯವಸ್ಥೆ ತರುವ ಕಡೆಗೆ ಸಾಗಲಿ ಎಂದು ಆಶಿಸಿದರು.