ಮುಂಬೈ: ಸಮಯ ಹೇಗೆ ಹಾರುತ್ತದೆ ಗೊತ್ತಾಗುವುದಿಲ್ಲ. ಹೃತಿಕ್ ರೋಷನ್ ಅಭಿನಯದ ಸಕೈ-ಫೈ ಚಿತ್ರ 'ಕೋಯಿ ಮಿಲ್ ಗಯಾ' ಆಗಸ್ಟ್ 8 ರಂದು 20 ವರ್ಷಗಳನ್ನು ಪೂರೈಸಲಿದೆ.
ಇಲ್ಲಿಯವರೆಗೆ, ಚಿತ್ರವನ್ನು ಅದರ ವಿಶಿಷ್ಟ ಪರಿಕಲ್ಪನೆಗಾಗಿ ನೆನೆಸಿಕೊಳ್ಳಲಾಗುತ್ತದೆ. ನಿರ್ದೇಶಕ ರಾಕೇಶ್ ರೋಷನ್ ಇಪ್ಪತ್ತು ವರ್ಷಗಳ ಹಿಂದೆ, ಅವರು ಚಿತ್ರದಲ್ಲಿ ಹೃತಿಕ್ ಪಾತ್ರದ ರೋಹಿತ್ ಮೆಹ್ತಾನ ಜೀವನವನ್ನು ಬದಲಿಸಿದ ಪ್ರೀತಿಯ ಅನ್ಯಲೋಕದ "ಜಾದೂ" ಅನ್ನು ನಮಗೆ ಪರಿಚಯಿಸಿದ್ದರು.
ಈ ಚಿತ್ರದಲ್ಲಿ ಹೃತಿಕ್ ಮಾನಸಿಕ ಅಸ್ವಸ್ಥ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದು, ಜಾದೂ ಪ್ರವೇಶದ ನಂತರ ಯಾವ ರೀತಿಯಲ್ಲಿ ಮಾನಸಿಕ ಅಸ್ವಸ್ಥನ ಜೀವನ ಬದಲಾಗುತ್ತದೆ ಎಂದು ತೋರಿಸಲಾಗಿದೆ. ಇದೀಗ ಈ ಸಿನಿಮಾದ ನಿರ್ಮಾಪಕರು, ಸಿನಿಮಾದ ಅಭಿಮಾನಿಗಳಿಗಾಗಿ ವಿಶೇಷ ಸುದ್ದಿಯನ್ನು ಹೊರತಂದಿದ್ದು, 'ಕೋಯಿ ಮಿಲ್ ಗಯಾ' ಚಿತ್ರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 4ರಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.
ಈ ಅಪ್ಡೇಟ್ಅನ್ನು ಹಂಚಿಕೊಂಡ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಬುಧವಾರ, "'ಕೋಯಿ ಮಿಲ್ ಗಯಾ' ಚಿತ್ರ ತನ್ನ 20 ನೇ ವಾರ್ಷಿಕೋತ್ಸವವನ್ನು 30 ನಗರಗಳಲ್ಲಿ ಮರು-ಬಿಡುಗಡೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದೆ. 20 ವರ್ಷಗಳ ಹಿಂದೆ ಜನರು ಹೆಚ್ಚಾಗಿ ಇಷ್ಟಪಟ್ಟ ಮತ್ತು ಭಾರೀ ಯಶಸ್ಸನ್ನು ಕಂಡ ಚಲನಚಿತ್ರವು 4 ಆಗಸ್ಟ್ 2023 ರಿಂದ #ಭಾರತದ 30 ನಗರಗಳಾದ್ಯಂತ #PVR #INOX ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.