ಉಡುಪಿಯಲ್ಲಿ ಬಿಹಾರ ರಾಜ್ಯದ ಮಿಥಿಲಾ ನಗರಿಯ ಕೊಹ್ಬಾರ್​ ಕಲೆಗಳ ಕಾರ್ಯಾಗಾರ ನಡೆಸಿದ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​. ಕಲಾವಿದ ಶ್ರವಣ್​ ಪಾಸ್ವಾನ್​ ಕಲೆಯ ರಚನೆಯ ತರಬೇತಿ ನೀಡಿದರು. 
ನ್ಯೂಸ್

ಕೃಷ್ಣನೂರಲ್ಲಿ ಮಿಂಚಿದ ಸೀತಾ ನಗರಿಯ ಕಲೆ

ಉಡುಪಿಯಲ್ಲಿ ಅನಾವರಣಗೊಂಡ ಮಿಥಿಲಾ ಪರಂಪರೆ --- ಸಂಸ್ಕೃತಿ ಬಿಂಬಿಸಿದ ಬಣ್ಣ ಬಣ್ಣದ ಗೆರೆ

ಪ್ರಶಾಂತ ಭಾಗ್ವತ, ಉಡುಪಿ
ವಿವಿಧ ಕಲೆ, ಸಂಪ್ರದಾಯ ಒಳಗೊಂಡ ಹಾಗೂ ಶ್ರೀಕೃಷ್ಣ ಸನ್ನಿಧಿ ಇರುವ ಉಡುಪಿಯಲ್ಲಿ ಸೀತಾಮಾತೆಯ ಜನ್ಮಭೂಮಿ ಮಿಥಿಲಾ ನಗರದ ಪಾರಂಪರಿಕ ಕೊಹ್ಬಾರ್​ ಕಲೆ ತನ್ನನ್ನು ಪರಿಚಯಿಸಿಕೊಂಡಿದೆ.

ಕರ್ನಾಟಕದ ಖ್ಯಾತ ಕಾವಿ ಕಲಾವಿದ, ಉಡುಪಿಯ ಭಾವನಾ ಫೌಂಡೇಷನ್​ನ ಡಾ. ಜನಾರ್ದನ ರಾವ್​ ಹಾವಂಜೆ ಅವರು ವಿವಿಧ ದೇಸೀಯ ಜಾನಪದ ಕಲೆಗಳನ್ನು ಸರಣಿ ಕಾರ್ಯಾಗಾರದ ಮೂಲಕ ಜನಮಾನಸಕ್ಕೆ ತಲುಪಿಸುತ್ತಿದ್ದು, ಬಿಹಾರ ರಾಜ್ಯದ 4 ಪ್ರಮುಖ ಚಿತ್ರಕಲೆಯನ್ನು ಕಾರ್ಯಾಗಾರಕ್ಕೆ ಇಳಿಸಿದ್ದಾರೆ.

ಕೊಹ್ಬಾರ್​ ಕಲೆ

ತ್ರೇತಾಯುಗದಲ್ಲಿ ಕಲೆ ಇದು. ಬಿಹಾರ ರಾಜ್ಯದ ಮಿಥಿಲಾ ನಗರದಲ್ಲಿ ಶ್ರೀರಾಮಚಂದ್ರನೊಂದಿಗೆ ಸೀತಾದೇವಿ ಮದುವೆಯಾದ ಬಳಿಕ ಇಬ್ಬರೂ ದುರ್ಗಾದೇವಿಯನ್ನು ಪೂಜಿಸಿದ ಕಥೆ ತಿಳಿಸುತ್ತದೆ. ಇಂದಿಗೂ ಬಿಹಾರದಲ್ಲಿ ನಡೆಯುವ ಪ್ರತಿ ಮದುವೆ ಕಾರ್ಯದಲ್ಲಿ ಮನೆಯ ಗೋಡೆಯ ಮೇಲೆ ಕೊಹ್ಬಾರ್​ ಕಲೆಯಲ್ಲಿ ಚಿತ್ರಿಸಿದ ದುರ್ಗಾ ಮಾತೆಯನ್ನು ನವ ದಂಪತಿ ಪೂಜಿಸುವ ಪದ್ಧತಿ ಇದೆ. ಕಮಲದ ಎಲೆಯ ಹಿನ್ನೋಟದಲ್ಲಿ ರಚನೆಯಾಗುವ ಈ ಚಿತ್ರ, ಸೀತಾ ಕಲ್ಯಾಣೋತ್ಸವ ಹೇಗೆ ನಡೆಯಿತೆಂದು ವಿವರಿಸುತ್ತದೆ. ಕೇವಲ ಕೆಂಪು ಬಣ್ಣದಲ್ಲಿ ಮಾತ್ರ ಚಿತ್ರ ರಚಿಸಲಾಗುತ್ತದೆ.

ಜಾಲಿ ವಿನ್ಯಾಸ

ಇದು ಕೇವಲ ಚಿತ್ರಕಲೆಯಲ್ಲ, ಬಿಹಾರಿಗಳ ಜೀವನದ ಅವಿಭಾಜ್ಯ ಅಂಗ. ಪರಿಸರದಲ್ಲಿ ಲಭ್ಯವಿರುವ ವಸ್ತ ಬಳಸಿಕೊಂಡು ಮನೆಯ ಕಿಟಕಿ ರಚಿಸಿಕೊಳ್ಳುವುದೇ ಜಾಲಿ ಕಲೆಯ ವಿಶೇಷ. ಮುಲ್ತಾನಿ ಮಿಟ್ಟಿ (ಮಣ್ಣು), ಬಿದಿರು ಹಾಗೂ ಹುಲ್ಲು ಬಳಸಿ ಜಾಲಿ ವಿನ್ಯಾಸ ರಚಿಸಲಾಗುತ್ತದೆ. ಅವುಗಳ ಮೇಲೆ ಸುಂದರ ಚಿತ್ರ ಬಿಡಿಸುತ್ತಾರೆ. ಬಿಹಾರವಲ್ಲದೆ, ರಾಜಸ್ಥಾನದಲ್ಲಿಯೂ ಸಹ ಈ ಕಲೆ ಜೀವಂತಿಕೆ ಹೊಂದಿದೆ.

ಟಿಕುಲಿ ಕಲೆ

ಮಹಿಳೆಯರು ಹಣೆಗೆ ಹಚ್ಚಿಕೊಳ್ಳುವ ಬಿಂದಿ (ಕುಂಕುಮ) ವಿನ್ಯಾಸದ ಕಲೆಯಿದು. ಈ ಕಲೆಗೆ 8 ಶತಮಾನದ ಹಿನ್ನೆಲೆ ಇದೆ. ರಾಜ&ಮಹಾರಾಜರ ಆಳ್ವಿಕೆ ಕಾಲದಲ್ಲಿ ರಾಣಿ-ಮಹಾರಾಣಿಯರು ತಮ್ಮ ಅಲಂಕಾರಕ್ಕಾಗಿ ಬಳಕೆ ಮಾಡುತ್ತಿದ್ದ ಕಲೆ ಇದು. ಅಂದು ಅವರು ಚಿನ್ನ, ವಜ್ರ-ವೈಢೂರ್ಯಗಳಿಂದ ತಯಾರಿಸಿದ ಬಿಂದಿ ಧರಿಸುತ್ತಿದ್ದರು. ಆದರೆ, ರಾಜ್ವರ ಆಳ್ವಿಕೆ ಮುಗಿದ ಬಳಿಕ ಕಲೆ ಕಳೆಗುಂದಿತು. ಹೀಗಾಗಿ ಟಿಕುಲಿ ಕಲಾವಿದರು ಗೋಡೆಗಳ ಮೇಲೆ, ಕನ್ನಡಿ ಮೇಲೆ ಹಾಗೂ ವಿವಿಧ ಪೇಟಿಂಗ್​ಗಳ ಮೇಲೆ ಬಿಂದಿ ಮಾದರಿಯ ಚಿತ್ರ ಬಿಡಿಸಿ, ಕಲೆ ಉಳಿಸಿದರು. ಈ ಕಲೆಗೆ ದೊಡ್ಡ ಇತಿಹಾಸ ಇಲ್ಲ. ಆದರೂ ಬಿಹಾರದಲ್ಲಿ ತಯಾರಾಗುವ ಪ್ರತಿ ವಸ್ತುಗಳ ಮೇಲೂ ಈಗ ಟಿಕುಲಿ ಕಲೆ ತನ್ನ ಛಾಪು ಒತ್ತಿರುವುದು ವಿಶೇಷ.

ಮಂಜೂಷಾ ಕಲೆ

ಇದು ದ್ವಾಪರ ಯುಗದ ಕಲೆ. ಮಹಾಭಾರತದಲ್ಲಿ ಅಂಗ ಪ್ರದೇಶದ (ಬಿಹಾರದ ಭಾಗಲ್​ಪುರ) ರಾಜನಾಗಿದ್ದ ಕರ್ಣನ ಕಾಲದಿಂದ ಇದು ಪಾರಂಪರಿಕ ಕಲೆಯಾಗಿ ಬಂದಿದೆ. ಇದು ಶಿವನ ಪುತ್ರಿ ಮಾನಸಾದೇವಿಯನ್ನು ಪೂಜಿಸುವ ಪೌರಾಣಿಕ ಹಿನ್ನೆಲೆಯ ಚಿತ್ರಕಲೆ. ಚಂದ್ರಧರ ಸೌದಾಗರ್​ ಎಂಬ ಸ್ವರ್ಣ ವ್ಯಾಪಾರಿಯ ಮೂಲಕಥೆಯೊಂದಿಗೆ ಥಳಕು ಇದೆ. ವ್ಯಾಪಾರಿಯ ನೌಕೆಗೆ ಮಾಲಾಕಾರ ಸಮುದಾಯದ ಲಹಸನ ಎಂಬಾತ ಚಿತ್ರಿಸಿಕೊಟ್ಟ ಕಲೆ ಇದಾಗಿದ್ದು, ಆತನೇ ಮಂಜೂಷಾ ಕಲೆಯ ಜನಕ. ಐದು ಬಗೆಯ ಬಾರ್ಡರ್​ಗಳ ಪ್ರಾಮುಖ್ಯತೆಯ ಈ ಕಲೆಯಲ್ಲಿ ಹಸಿರು, ಹಳದಿ ಹಾಗೂ ಗುಲಾಬಿ ಬಣ್ಣ ಮಾತ್ರ ಬಳಕೆ ಮಾಡಲಾಗುತ್ತದೆ.

ಕಡಲ ನಗರಿಯಲ್ಲಿ 14ನೇ ಕಾರ್ಯಾಗಾರ

ದೇಸೀಯ ವಿವಿಧ 20 ಕಲೆಯನ್ನು ಉಡುಪಿಗೆ ಪರಿಚಯಿಸಬೇಕು ಎಂದು ಡಾ.ಜನಾರ್ದನ ರಾವ್​ ಕಾರ್ಯಮಗ್ನರಾದಾಗ ಅವರಿಗೆ 140ಕ್ಕೂ ಹೆಚ್ಚು ದೇಸೀಯ ಕಲೆಗಳ ಮಾಹಿತಿ ಲಭಿಸಿತು. ಮಳೆಗಾಲ ಬಿಟ್ಟು ತಿಂಗಳಿಗೆ ಒಂದು ಕಲೆಯಂತೆ 80 ಕಾರ್ಯಾಗಾರ ಮಾಡಲು ಯೋಜಿಸಿದ್ದಾರೆ. ಪ್ರಸಕ್ತ 14ನೇ ಕಾರ್ಯಾಗಾರದಲ್ಲಿ ಬಿಹಾರಿ ಕಲೆಗಳನ್ನು ಪರಿಚಯಿಸಿದ್ದಾರೆ. ಉತ್ತರ ಕನ್ನಡದ ಹಸೆ ಚಿತ್ತಾರ, ಮಹಾರಾಷ್ಟ್ರದ ವಾರ್ಲಿ ಕಲೆ, ಕೇರಳದ ಭಿತ್ತಿಚಿತ್ರ, ಬಿಹಾರದ ಮಧುಬನಿ, ಗೋಧನಾ, ಪೇಪರ್​ಮೆಶ್​, ಓರಿಸ್ಸಾದ ಪಟಚಿತ್ರ, ಮೈಸೂರಿನ ಗಂಜೀಫಾ, ಮೈಸೂರು ಚಿತ್ರಕಲೆ ಪರಿಚಯಿಸಿದ್ದಾರೆ. ಖಾಸಗಿ ಸಹಭಾಗಿತ್ವ ಲಭಿಸಿದರೆ ನಶಿಸುತ್ತಿರುವ ದೇಸೀಯ ಕಲೆಗಳನ್ನು ಉಳಿಸಬೇಕೆಂಬ ತುಡಿತ ಅವರಿಗಿದ್ದು, ಆಸಕ್ತರು ಮೊ.ಸಂ. 9845650544 ಸಂಪರ್ಕಿಸಬಹುದು.

ಮರೆಯಲ್ಲಿದ್ದ ಕೋಹ್ಬಾರ್​ ಕಲೆಯನ್ನು 1962ರಲ್ಲಿ ಪದ್ಮಶ್ರೀ ಸೀತಾದೇವಿ ಅವರು ಬೆಳಕಿಗೆ ತಂದು, ಮಾರುಕಟ್ಟೆಯನ್ನೂ ಒದಗಿಸಿದರು. ಇಂದಿನ ಮಕ್ಕಳಿಗೆ ಜಾನಪದ ಕಲೆಯ ಬಗ್ಗೆ ತಿಳಿಸಿಕೊಡಬೇಕಿದೆ. ನಮ್ಮತನವನ್ನು ಎಂದೂ ಮರೆಯಬಾರದು, ಮೆರೆಸಬೇಕು. ತಾಯಿ ಊರ್ಮಿಳಾದೇವಿಯಿಂದ ಈ ಕಲೆಯನ್ನು ನಾನು ಮುಂದುವರಿಸಿದ್ದೇನೆ. ಶ್ರವಣ್​ ಪಾಸ್ವಾನ್​, ಬಿಹಾರದ ಕೊಹ್ಬಾರ್​ ಕಲಾವಿದ
ಭಾರತದಲ್ಲಿ ಬ್ರಿಟಿಷ್​ ಅಧಿಕಾರಿ (ಐಸಿಎಸ್​)ಯಾಗಿದ್ದ ವಿಲಿಯಂ ಜಾರ್ಜ್​ ಆಶ್ಚರ್​ ಎಂಬಾತ ಮಂಜೂಷಾ ಕಲೆಗೆ ಪ್ರೋತ್ಸಾಹ ನೀಡಿದ್ದ. 1934ರಲ್ಲಿ ಲಂಡನ್​ನ ಇಂಡಿಯಾ ಹೌಸ್​ನಲ್ಲಿ ಈ ಕಲೆಯ ಪ್ರದರ್ಶನ ಏರ್ಪಡಿಸಿದ್ದ. ಬಿಹಾರದಲ್ಲಿ ಇಂದಿಗೂ ಯಾವುದೇ ಪಕ್ಷದ ಸರ್ಕಾರವಿದ್ದರೂ ಎಲ್ಲ ಸರ್ಕಾರಿ ಯೋಜನೆಗಳನ್ನೂ ಪಾರಂಪರಿಕ ಮಂಜೂಷಾ ಕಲೆಯ ಮೂಲಕವೇ ಪ್ರಚಾರ ಮಾಡಲಾಗುತ್ತದೆ. ಪವನಕುಮಾರ್​ ಸಾಗರ. ಬಿಹಾರದ ಮಂಜೂಷಾ ಕಲಾವಿದ