ನ್ಯೂಸ್

ಕೋಡಿ ಬಿದ್ದ ಅಸುಂಡಿ ಕೆರೆ; ಅಪಾರ ಪ್ರಮಾಣದ ಬೆಳೆ ಹಾನಿ

ರಾಣೆಬೆನ್ನೂರ: ಕಳೆದ ನಾಲ್ಕೆ$ದು ದಿನಗಳಿಂದ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ತಾಲೂಕಿನ ಅಸುಂಡಿ ಕೆರೆಯ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಹೊರಗೆ ಹರಿಯುತ್ತಿದ್ದು, ರೈತರ ಜಮೀನುಗಳು ಜಲಾವೃತಗೊಂಡಿವೆ.
ಅಸುಂಡಿ ಕೆರೆ ನೀರು ಸುತ್ತಲಿನ ಹಳೆ ಹೂಲಿಹಳ್ಳಿ, ಹೊಸ ಹೂಲಿಹಳ್ಳಿ, ಕೂನಬೇವು, ಎರೇಕುಪ್ಪಿ ಗ್ರಾಮಗಳ ಸುತ್ತಲಿನ ಜಮೀನುಗಳಿಗೆ ನುಗ್ಗಿದ್ದು, ಕಟಾವು ಹಂತಕ್ಕೆ ಬಂದಿದ್ದ ಗೋವಿನ ಜೋಳ, ಹತ್ತಿ, ಹಸಿಮೆಣಸಿನಕಾಯಿ, ಟೊಮ್ಯಾಟೊ ಬೆಳೆಗಳು ಜಲಾವೃತಗೊಂಡಿವೆ. ಅಲ್ಲದೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ ಸೇರಿ ನೂರಾರು ಎಕರೆಯಷ್ಟು ಬೆಳೆ ನೀರಿನ ರಭಸಕ್ಕೆ ಕೊಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಪರಿಹಾರಕ್ಕೆ ಆಗ್ರಹ…
ಕೆರೆ ಕೋಡಿ ಬಿದ್ದಿರುವುದರಿಂದ ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ರೈತರು ಲಾಂತರ ರೂ. ಖರ್ಚು ಮಾಡಿ ಮೆಕ್ಕೆಜೋಳ, ಉಳ್ಳಾಗಡ್ಡಿ, ಟೊಮ್ಯಾಟೊ ಸೇರಿ ನಾನಾ ಬಗೆಯ ಬೆಳೆ ಬೆಳೆದಿದ್ದರು. ಎಲ್ಲ ಬೆಳೆ ರೈತರ ಕೈಗೆ ಬರುವ ಹಂತಕ್ಕೆ ಬೆಳೆದು ನಿಂತಿತ್ತು. ಆದರೆ, ಕೆರೆ ಕೋಡಿ ನೀರು ಸಂರ್ಪೂಣ ಬೆಳೆ ಹಾನಿ ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತಹಸೀಲ್ದಾರ್​ ಭೇಟಿ…
ಕೆರೆ ಕೋಡಿ ಬಿದ್ದ ಸ್ಥಳಕ್ಕೆ ತಹಸೀಲ್ದಾರ್​ ಆರ್​.ಎಚ್​. ಭಾಗವಾನ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಕೆರೆ ಕೋಡಿ ನೀರು ಹರಿದು ಹಾನಿಗೊಳಗಾಗಿರುವ ರೈತರ ಜಮೀನುಗಳಲ್ಲಿನ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಪರಿಹಾರ ನೀಡಲಾಗುತ್ತದೆ. ರೈತರು ತಮ್ಮ ದನಕರುಗಳನ್ನು, ಮಕ್ಕಳನ್ನು ಕೆರೆಯ ಕಡೆಗೆ ಹೋಗದಂತೆ ಎಚ್ಚರವಹಿಸಬೇಕು ಎಂದರು.