ಮಂಡಗದ್ದೆ ಪ್ರಕಾಶ್ ಬಾಬು
ಕೊಡಗಿನ ಪ್ರಮುಖ ದೇವರುಗಳಲ್ಲಿ ಇಗ್ಗುತಪ್ಪ ಸಹ ಒಂದು. ಈ ದೇವರನ್ನು ಮಳೆ ದೇವರು ಎಂದು ಆರಾಧಿಸುತ್ತಾರೆ. ಭತ್ತ ಕೃಷಿಗಾಗಿ ಕಾಲಕಾಲಕ್ಕೆ ಮಳೆಯನ್ನು ಸುರಿಸುತ್ತಾನೆ ಎಂದು ನಂಬುತ್ತಾರೆ ಕೊಡವರು. ಈ ಹಿನ್ನೆಲೆಯಲ್ಲಿಯೇ ಹುತ್ತರಿ ಅಥವಾ ಪುತ್ತರಿ ಹಬ್ಬದ ದಿನಾಂಕವನ್ನು ಇದೇ ದೇವಾಲಯದಲ್ಲಿ ನಿರ್ಧರಿಸುತ್ತಾರೆ. ಗೋಧೂಳಿ ಲಗ್ನದಲ್ಲಿ ಮೊದಲು ಈ ದೇವಾಲಯಕ್ಕೆ ಭತ್ತದ ಕದಿರನ್ನು ತಂದು ಪೂಜಿಸಿದ ನಂತರ ಹುತ್ತರಿ ಹಬ್ಬ ಆಚರಿಸುತ್ತಾರೆ. ಪುತ್ ಎಂದರೆ ಹೊಸ ಹಾಗೂ ಅರಿ ಎಂದರೆ ಅಕ್ಕಿ. ವರ್ಷವಿಡೀ ಜಮೀನಿನಲ್ಲಿ ಭತ್ತದ ಸಸಿ ನಾಟಿ ಮಾಡಿ ಅದನ್ನು ಪೂಜಿಸಿ ಫಸಲನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮವೇ ಪುತ್ತರಿ. ಇದಕ್ಕೆ ಒಂದು ವಾರದ ತಯಾರಿ ನಡೆಯುತ್ತದೆ. ಹೊಸ ಅಕ್ಕಿಯನ್ನು ಭಕ್ತಿಭಾವದಿಂದ ಪೂಜಿಸಿ ಎತ್ತಿನ ಗಾಡಿಗೆ, ಎತ್ತಿಗೆ ಪೂಜಿಸಿ ಮನೆಗೆ ತುಂಬಿಸಿಕೊಳ್ಳುತ್ತಾರೆ. ಭತ್ತದ ಕದಿರನ್ನು ಮನೆಗೆ ತುಂಬಿಕೊಳ್ಳುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಶುದ್ಧವಾಗಿರಬೇಕು. ಮೊದಲು ಐನ್ವುನೆಯ ನೆಲಕ್ಕಿಯಲ್ಲಿ ಪೂಜಿಸಿದ ನಂತರ ಅದನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ತೆಗೆದುಕೊಳ್ಳುತ್ತಾರೆ. ಭಕ್ತಿಭಾವದಿಂದ ಮನೆಗೆ ತಂದು ಮನೆಯ ಬಾಗಿಲು, ಕೊಟ್ಟಿಗೆಗೆ, ದೇವರ ಕೋಣೆಗೆ ಕಟ್ಟುತ್ತಾರೆ. ಇದು ಮುಖ್ಯವಾಗಿ ಪ್ರಕೃತಿ ಪೂಜೆಯ ಸಂಕೇತ.
ಜಾನಪದ ಕಲೆ
ಕೊಡಗಿನ ಹುತ್ತರಿ ಹಬ್ಬ ಒಂದು ರೀತಿಯಲ್ಲಿ ಜಾನಪದ ಕಲೆಗಳ ಕಣಜ. ಈ ಹಬ್ಬಕ್ಕೆ ಒಂದು ವಾರ ಮೊದಲು ಜನ ಸೇರಿ ಕೋಲಾಟ, ನೃತ್ಯ ತರಬೇತಿ ಆರಂಭಿಸುತ್ತಾರೆ. ಇದನ್ನು ಈಡ್ ಎಂದು ಕರೆಯುತ್ತಾರೆ. ಇದರಲ್ಲಿ ಪ್ರತಿ ಮನೆಯ ಒಬ್ಬನಾದರೂ ಭಾಗವಹಿಸಬೇಕು. ಹುತ್ತರಿ ಹಬ್ಬದ ನಂತರ ಪ್ರತಿ ಮನೆಯಲ್ಲಿ ಕೋಲಾಟ ನಡೆಯುತ್ತದೆ. ಒಂದೇ ಊರಿನವರು ಸೇರಿ ಆಡುವ ಕೋಲಾಟಕ್ಕೆ ಊರ್ ಮಂದ್ ಕೋಲ್ ಎಂದು ಕರೆಯುತ್ತಾರೆ. ಹಲವು ಊರು ಸೇರಿ ನಡೆಸುವ ಕೋಲಾಟಕ್ಕೆ ನಾಡ್ ಮಂದ್ ಕೋಲ್ ಎನ್ನುತ್ತಾರೆ. ಹಲವು ನಾಡು ಸೇರಿ ಮಾಡುವ ಕೋಲಾಟಕ್ಕೆ ದೇಶ ಮಂದ್ ಕೋಲ್ ಎನ್ನುತ್ತಾರೆ. ಈ ಕೋಲಾಟದಲ್ಲಿ 32 ವಿಧ. ಆ ಸಮಯದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಕೋಲಾಟದ ನಂತರ ಆ ಕೋಲನ್ನು ಭಕ್ತಿ ಭಾವದಿಂದ ಮನೆಯಲ್ಲಿ ಕಾಯ್ದಿರಿಸುತ್ತಾರೆ.
ಕೊಡಗಿನ ಹಬ್ಬಗಳಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ತಿಂಡಿಗಳದ್ದು ಮತ್ತೊಂದು ವಿಶೇಷ. ಈ ಹುತ್ತರಿ ಹಬ್ಬದಲ್ಲಿ ವಿಶೇಷವಾಗಿ ತಂಬುಟ್ಟ್ ಮತ್ತು ಪುತ್ತರಿ ಕಳಂಜ ಇರುತ್ತದೆ. ತಂಬುಟ್ಟನ್ನು ಈ ಹಬ್ಬದಲ್ಲಿ ಮಾತ್ರ ಮಾಡುತ್ತಾರೆ. ಹುತ್ತರಿ ಗೆಣಸನ್ನು ಈ ಸಂದರ್ಭದಲ್ಲಿ ಭೂಮಿಯಿಂದ ತೆಗೆದು ಬಳಸುತ್ತಾರೆ. ತಂಬಿಟ್ಟನ್ನು ಬಾಳೆ, ಹುರಿದ ಅಕ್ಕಿಹಿಟ್ಟು, ಎಳ್ಳು, ತುಪ್ಪ, ತೆಂಗಿನಕಾಯಿ ಹಾಕಿ ಮಾಡಿರುತ್ತಾರೆ. ಈ ಸುಗ್ಗಿಹಬ್ಬದಲ್ಲಿ ಕೊಡಗಿನ ತುಂಬ ಸಂಸ್ಕೃತಿಯ ಕಲಿಕೆ ಮತ್ತು ಪ್ರದರ್ಶನದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಹಬ್ಬವು ಧಾರ್ವಿುಕ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಪ್ರಕೃತಿ ಮಾತೆಯ ಸಂಕೇತದ ಹಬ್ಬವಾಗಿದೆ.
ಕದಿರು ಕಟ್ಟುವುದು
ಕುಟುಂಬದ ಹಿರಿಯ ವ್ಯಕ್ತಿಯ ನೇತೃತ್ವದಲ್ಲಿ ನೆಲ್ಲಕ್ಕಿ ನಡುಬಾಡೆಯಲ್ಲಿ ‘ಕಾರೋಣ’ನನ್ನು ಪ್ರಾರ್ಥಿಸಿ ಆ ಮನೆಯ ಮುಂದಿನ ಅಂಗಳದಲ್ಲಿ ಕದಿರು ಕಟ್ಟಲು ಕೆಲವು ಕಾಡಿನ ಎಲೆ ಮತ್ತು ನಾರನ್ನು ಸೇರಿಸಿ ಕಟ್ಟಿ ತಯಾರು ಮಾಡಿಕೊಳ್ಳುತ್ತಾರೆ. ಇದನ್ನು ನೆರೆ ಕಟ್ಟುಮೊ ಎಂದು ಕರೆಯುತ್ತಾರೆ. ಆ ದಿನ ಮನೆಯಲ್ಲಿ ಎಲ್ಲರೂ ಉಪವಾಸ ಇರುತ್ತಾರೆ. ಜಮೀನಿಗೆ ಹೋಗಿ ಭತ್ತದ ತೆನೆಯ ಬುಡಕ್ಕೆ ಹಾಲು, ಜೇನುತುಪ್ಪ ಹಾಕಿ ಕತ್ತರಿಸುತ್ತಾರೆ. ನಂತರ ಅದನ್ನು ಪೊಲಿ ಪೊಲಿಯೇ ಬಾ ಎಂದು ಘೊಷ ಕೂಗುತ್ತ ಮನೆಗೆ ತರುವುದೇ ಒಂದು ಸಂಭ್ರಮ. ಇದಕ್ಕೆ ಸಿರಿಯನ್ನು ಕರೆಯುವುದು ಎನ್ನುತ್ತಾರೆ.