ಸಿದ್ದಾಪುರ: ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ಸೆ.7ರಂದು ಶ್ರೀ ನಾರಾಯಣ ಗುರುವಿನ 171ನೇ ಜಯಂತಿ ಆಚರಣೆ ನಡೆಯಲಿದೆ ಎಂದು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ತಿಳಿಸಿದ್ದಾರೆ.
ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್, ಗುರು ಜಯಂತಿ ಆಚರಣಾ ಸಮಿತಿ ಹಾಗೂ ಜಿಲ್ಲೆಯ ಎಸ್.ಎನ್.ಡಿ.ಪಿ. ಶಾಖೆಗಳ ಸಹಯೋಗದಲ್ಲಿ ಸೆ.7 ರಂದು ವಿಜೃಂಭಣೆಯಿಂದ ನಾರಾಯಣ ಗುರು ಜಯಂತಿ ಆಚರಿಸಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಯೂನಿಯನ್ ಮಾಜಿ ಕಾರ್ಯದರ್ಶಿ ಎಂ.ಪಿ ಶಿವಪ್ರಸಾದ್ ಧ್ವಜಾರೋಹಣ ನೆರವೇರಿಸಲಿದ್ದು, ಬೆಳಗ್ಗೆ 10.30 ಗಂಟೆಗೆ ನಡೆಯುವ ಮೆರವಣಿಗೆಯನ್ನು ಪ್ರಮುಖರಾದ ಎ.ವಿ.ಸಜೀವನ್ ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಿಸಿ, ಸಿದ್ದಾಪುರ ಸ್ವರ್ಣಮಾಲ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ವಿ.ಕೆ.ಲೋಕೇಶ್ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಂಸದ ಯದುವೀರ ಒಡೆಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯೂನಿಯನ್ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು. ಕೇರಳದ ಪ್ರಸಿದ್ಧ ಕಲಾವಿದ ರಂಜು ಚಾಲಕ್ಕುಡಿ ಅವರನ್ನೊಳಗೊಂಡ ತಂಡದ ರಸಮಂಜರಿ ಕಾರ್ಯಕ್ರಮ ನೀಡಲಿದೆ ಎಂದು ಮಾಹಿತಿ ನೀಡಿದರು.
ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಪ್ರೇಮಾನಂದ, ಆಚರಣಾ ಸಮಿತಿ ಅಧ್ಯಕ್ಷ ಎಂ.ಜಿ.ರಾಜು, ಕಾರ್ಯದರ್ಶಿ ಕೆ.ಕೆ ರೆಜಿತ್ ಕುಮಾರ್, ಯೂನಿಯನ್ ಪ್ರಮುಖರಾದ ಆರ್.ಗಿರೀಶ್, ಪಾಪಯ್ಯ, ಎಂ.ಎ.ಆನಂದ, ಯೂನಿಯನ್ ಮಹಿಳಾ ಅಧ್ಯಕ್ಷ ರೀಶ ಸುರೇಂದ್ರ ಇದ್ದರು.