ನ್ಯೂಸ್

ವೀಣಾ- ಪೊನ್ನಣ್ಣ ನಡುವೆ ಟಿಕೆಟ್ ಫೈಟ್

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ಕಾನೂನು ಘಟಕ
ಅಧ್ಯಕ್ಷ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದಂತೆ ವೀಣಾ ಅಚ್ಚಯ್ಯ ಹೆಸರು ಮುನ್ನಲೆಗೆ ಬಂದಿದೆ.

ಕಳೆದರಡು ವರ್ಷದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಎ.ಎಸ್. ಪೊನ್ನಣ್ಣ ಸ್ಪರ್ಧೆ ಖಚಿತ ಎಂಬ ಅಭಿಪ್ರಾಯ ಮೂಡಿತ್ತು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೂಚನೆಯನ್ವಯ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕಾಣಿಸಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊನ್ನಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ ಎಂಬ ಭಾವನೆ ಮೂಡಿತ್ತು.

ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾಗುತ್ತಿದ್ದಂತೆ ವೀಣಾ ಅಚ್ಚಯ್ಯ ಟಿಕೆಟ್ ಪಡೆಯುವ ವಿಶ್ವಾಸ ವನ್ನು ಅವರ ಬೆಂಬಲಿಗರು ವ್ಯಕ್ತ ಪಡಿಸಲಾರಂಭಿಸಿದ್ದಾರೆ. ಬಿಜೆಪಿ ಎದುರಿಸಲು ಸಜ್ಜಾಗುತ್ತಿದ್ದ ಎ.ಎಸ್. ಪೊನ್ನಣ್ಣ ಇದೀಗ ಕಾಂಗ್ರೆಸ್ ಟಿಕೆಟ್ ಪಡೆಯಲು ವರಿಷ್ಠರ ಮೇಲೆ ಪ್ರಭಾವ ಬೀರುವ ಅನಿವಾರ್ಯತೆ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪೊನ್ನಣ್ಣ ಕೂಡ ಆಪ್ತರಾಗಿರುವುದು ಟಿಕೆಟ್ ಪಡೆಯಲು ತೊಡಕಾಗುವುದಿಲ್ಲ ಎಂಬ ವಿಶ್ವಾಸವಿದೆ.

ಪೊನ್ನಣ್ಣ ಸ್ಪರ್ಧೆಗೆ ತೆರೆಮರೆಯಲ್ಲಿ ವಿರೋಧಿಸುತ್ತಿರುವ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ಕೆಪಿಸಿಸಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಇದೀಗ ವೀಣಾ ಅಚ್ಚಯ್ಯಗೆ ಬೆಂಬಲ ವಾಗಿ ನಿಂತಿದ್ದಾರೆಂಬ ವಿಚಾರ ರಾಜಕೀಯ ವಲದಯಲ್ಲಿ ಚರ್ಚೆಯಲ್ಲಿದೆ.

ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಎ.ಎಸ್. ಪೊನ್ನಣ್ಣ ವೃತ್ತಿ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿ ಕೊಳ್ಳಬೇಕು. ಬೆಂಗಳೂರಿನಲ್ಲಿ ವೃತ್ತಿ ಮಾಡಿಕೊಂಡು ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ನಾನು ನೇರವಾಗಿ ವಿರೋಧಿಸಿದ್ದೇನೆಂದು ಶಿವು ಮಾದಪ್ಪ ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಸುದ್ದಿ ಗೋಷ್ಠಿ ಮೂಲಕ ವಿರೋಧ ವ್ಯಕ್ತ ಪಡಿಸಿದ್ದಾರೆ.

ಬಿದ್ದಾಟಂಡ ಟಿ. ಪ್ರದೀಪ್ ಅಲ್ಪಮತಗಳ ಅಂತರದಲ್ಲಿ ಕೆ.ಜಿ. ಬೋಪಯ್ಯ ವಿರುದ್ಧ ಸೋಲು ಅನುಭವಿಸಿದ್ದರು. ಪ್ರದೀಪ್ ಹೃದಯಾಘಾತ ದಿಂದ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಾಗಲಿಲ್ಲ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಚೆಪ್ಪುಡೀರ ಅರುಣ್ ಮಾಚಯ್ಯ ವಿರುದ್ಧ ಕೆ.ಜಿ. ಬೋಪಯ್ಯ ದೊಡ್ಡ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
ಗೆಲ್ಲುವ ವಿಶ್ವಾಸದೊಂದಿಗೆ ಎ.ಎಸ್. ಪೊನ್ನಣ್ಣ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಮಾಡುತ್ತಿದ್ದರು. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎನ್ನುವ ಮಾತು ವ್ಯಕ್ತವಾಗುವಂತೆ ಮಾಡಿದ್ದರು. ಇದೀಗ ಸ್ವಪಕ್ಷೀಯ ಮುಖಂಡರು ಅಡ್ಡಗಾಲು ಹಾಕುವುದರ ಮೂಲಕ ಪೊನ್ನಣ್ಣ ನಾಗಲೋಟಕ್ಕೆ ತಡೆವೊಡ್ಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲಾಧ್ಯಕ್ಷರಾಗಿದ್ದರು. ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಖರ್ಗೆ ಶ್ರೀರಕ್ಷೆ ಕಾರಣವಾಗಿತ್ತು. ನಟಿ ಭಾವನಾ ಬದಲು ಅಂತಿಮ ಕ್ಷಣದಲ್ಲಿ ವೀಣಾ ಅಚ್ಚಯ್ಯಗೆ ಅವಕಾಶ ನೀಡುವಂತೆ ವರಿಷ್ಠರ ಮೇಲೆ ಖರ್ಗೆ ಪ್ರಭಾವ ಬೀರಿದ್ದರು. ಇದೀಗ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ ವಿರಾಜಪೇಟೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿದ್ದಾರೆಂಬ ವಿಶ್ವಾಸ ವೀಣಾ ಅಚ್ಚಯ್ಯ ಅವರಲ್ಲಿಯೂ ಇದೆ.

ಮಡಿಕೇರಿಗೆ ನೀಡಲಿ…
ವಿಧಾನ ಪರಿಷತ್ ಮಾಜಿ ಸದಸ್ಯೆಯಾಗಿರುವ ಶಾಂತೆಯಂಡ ವೀಣಾ ಅಚ್ಚಯ್ಯ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ವಿರಾಜಪೇಟೆ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಎ.ಎಸ್. ಪೊನ್ನಣ್ಣ ಅವರಿಗೆ ಟಿಕೆಟ್ ನೀಡಲಿ ಎಂದು ಕಾಂಗ್ರೆಸ್ಸಿನ ಹಲವು ಮುಖಂಡರು ಹೇಳಲಾರಂಭಿಸಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿರುವುದರಿಂದ ಯಾರಿಗೆ ಟಿಕೆಟ್ ನೀಡಿದ್ದರೂ ಗೊಂದಲ ಏರ್ಪಡಲಿದೆ. ಪ್ರತಿಯೊಬ್ಬ ರೊಂದಿಗೆ ಆತ್ಮೀಯವಾಗಿರುವ ವೀಣಾ ಅಚ್ಚಯ್ಯಗೆ ಟಿಕೆಟ್ ನೀಡಿದ್ದಲ್ಲಿ ಪಕ್ಷದಲ್ಲಿ ಗೊಂದಲ ಮೂಡುವುದಿಲ್ಲ. ಆ ಮೂಲಕ ೨ ಕ್ಷೇತ್ರದಲ್ಲಿ ಯೂ ಕಾಂಗ್ರೆಸ್ ಗೆಲ್ಲುವಂತೆ ಮಾಡಬಹುದೆಂಬ ಲೆಕ್ಕಚಾರ ಮುಂದಿಡುವವರಿದ್ದಾರೆ.

**
ನವೆಂಬರ್ ೧೫ ರವರೆಗೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳಿಗೆ ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ವರಿಷ್ಠರು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಿದ್ಧಾರೆ. ಪಕ್ಷ ನಿರ್ಧಾರಿಸುವ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರು ಕೆಲಸ ಮಾಡುತ್ತೇವೆ. ಶಿವು ಮಾದಪ್ಪ ವಿಚಾರಕ್ಕೆ ಸಂಬಂಧಿಸಿದ್ದಂತೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ತೀತೀರ ಧರ್ಮಜ ಉತ್ತಪ್ಪ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್.

**
ಚುನಾವಣೆ ಉದ್ದೇಶದಿಂದ ನಾನು ಜನರ ಕೆಲಸ ಮಾಡುತ್ತಿಲ್ಲ. ಹೀಗಿದ್ದರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೆಲಸ ಮಾಡಲು ಜನಪ್ರತಿನಿಧಿಯಾಗುವ ಅಗತ್ಯತೆ ಇದೆ. ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸ ಲಾಗುವುದು. ವರಿಷ್ಠರು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಲ್ಲಿ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸುತ್ತೇನೆ. ಎ.ಎಸ್. ಪೊನ್ನಣ್ಣ, ಅಧ್ಯಕ್ಷರು, ಕೆಪಿಸಿಸಿ ಕಾನೂನು ಘಟಕ.

**
ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳು ತುಂಬಾ ಇದ್ದಾರೆ. ಇನ್ನೂ ಕೂಡ ಅಭ್ಯರ್ಥಿ ಯಾರೆಂದು ಆಯ್ಕೆಯಾಗಿಲ್ಲ. ನಾನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಶಾಂತೆಯಂಡ ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ.