ನ್ಯೂಸ್

ಜಿಪಂ ಕ್ಷೇತ್ರ ಪುನರ್ ವಿಂಗಡಣೆಗೆ ಕಾಂಗ್ರೆಸ್ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಅವೈಜ್ಞಾನಿಕವಾಗಿ ಪುನರ್ ವಿಂಗಡಣೆ ಮಾಡಲಾಗಿದೆ. ೨೯ ಇದ್ದ ಕ್ಷೇತ್ರವನ್ನು ೨೫ ಕ್ಕೆ ಇಳಿಸಿ ರುವುದು ಕೊಡಗಿಗೆ ಮಾಡಿರುವ ಅನ್ಯಾಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅಸಮಾಧಾನ ವ್ಯಕ್ತ ಪಡಿಸಿ ದ್ದಾರೆ.

೩ ವಿಧಾನಸಭಾ ಕ್ಷೇತ್ರದಿಂದ ೨ ಕ್ಷೇತ್ರಕ್ಕೆ ಇಳಿಸಲಾಗಿತ್ತು. ಈಗ ಜಿಪಂ ಕ್ಷೇತ್ರ ಕಡಿತಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಕಾಂಗ್ರೆಸ್ಸಿನಿಂದ ಆಕ್ಷೇಪ ಸಲ್ಲಿಸಲಾಗುವುದೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರ ಪುನರ್ ವಿಂಗಡಣೆ ಮಾಡುವ ವೇಳೆ ಯಾರಿಂದ ಮಾಹಿತಿ ಪಡೆಯಲಾಗಿದೆ ಎಂದು ಗೊತ್ತಿಲ್ಲ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿಗೆ ೨೯ ಕ್ಕಿಂತ ಹೆಚ್ಚಿನ ಕ್ಷೇತ್ರದ ಅಗತ್ಯತೆ ಇದೆ. ಹೀಗಿರುವಾಗ ೪ ಕ್ಷೇತ್ರ ಕಡಿತಗೊಳಿಸಿರುವುದು ಅಭಿವೃದ್ಧಿ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಕೊಡಗಿಗೆ ಸಂಬಂಧಿಸಿದ್ದಂತೆ ೧೮ ಸಾವಿರ ಜನಸಂಖ್ಯೆಗೆ ಒಂದು ಜಿಪಂ ಕ್ಷೇತ್ರ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಹೀಗಿರುವಾಗ ಇದ್ದ ಕ್ಷೇತ್ರ ಕಡಿತಗೊಳಿಸಿರುವುದು ಸರಿಯಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರಿರುವ ಮುಳ್ಳುಸೋಗೆ ಗ್ರಾಮವನ್ನು ಜಿಪಂ ಕ್ಷೇತ್ರಕ್ಕೆ ಸೇರಿಸುವುದರ ಮೂಲಕ ಗೊಂದಲ ಉಂಟು ಮಾಡಲಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಆರೋಪಿಸಿದರು.

ಜಿಪಂ ಚುನಾವಣೆ ನಡೆಯದ್ದಂತೆ ತಡೆಯುವ ಉದ್ದೇಶದಿಂದ ಅವೈಜ್ಞಾನಿಕವಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ. ಆಕ್ಷೇಪ ಸಲ್ಲಿಸಲು ಮತ್ತು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪೂರಕವಾಗಿ ವಿಂಗಡಣೆ ಮಾಡಲಾಗಿದೆ. ಕೊಡಗಿನ ಬಗ್ಗೆ ಅಸಡ್ಡೆತನ, ನಿರ್ಲಕ್ಷೃ ಭಾವನ ಪ್ರದರ್ಶಿಸಲಾಗಿದೆ ಎಂದು ಟೀಕಿಸಿದರು.

ನೆಲ್ಲಿಹುದಿಕೇರಿ ಜಿಪಂ ಮತ್ತು ತಾಪಂ ಕ್ಷೇತ್ರ ಒಂದೇ ಆಗಿದೆ. ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ನೆಲ್ಲಿಹುದಿಕೇರಿ ತಾಪಂ ಕ್ಷೇತ್ರವನ್ನು ವಾಲ್ನೂರು- ತ್ಯಾಗತ್ತೂರು ತಾಪಂ ಕ್ಷೇತ್ರಕ್ಕೆ ಸೇರಿಸಲಾಗಿದೆ. ಜಿಪಂ ಕ್ಷೇತ್ರಗಳಲ್ಲಿ ಸಾಕಷ್ಟು ನ್ಯೂನತೆಗಳಿವೆ. ಅಪಹಾಸ್ಯಕ್ಕೆ ಒಳಗಾಗುವಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ ಎಂದು ದೂರಿದರು.

ಬಿಜೆಪಿಗೆ ಬೇಕಾದಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ. ಒಬ್ಬ ಮುಖಂಡರ ಗೆಲುವಿನ ಲೆಕ್ಕಚಾರದೊಂದಿಗೆ ಕ್ಷೇತ್ರ ರಚಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಟೀಕಿಸಿದರು. ಬಿಜೆಪಿ ನಾಯಕರಿಗೆ ಒಂದೊಂದು ಕ್ಷೇತ್ರವಾಗಿ ವಿಂಗಡಣೆ ಮಾಡಿದ್ದಾರೆ. ಜಿಪಂಗೆ ಬಿಜೆಪಿ ನಯಾಪೈಸೆ ಅನುದಾನ ತಂದಿಲ್ಲ ಎಂದು ಟೀಕಿಸಿದರು.

೩ ಎಂಎಲ್‌ಎ ಕ್ಷೇತ್ರವನ್ನು ೨ ಕ್ಷೇತ್ರಕ್ಕೆ ಇಳಿಸಿದ್ದಾಗ ಕೊಡಗಿನ ಜನ ಪ್ರಶ್ನಿಸಲಿಲ್ಲ. ಅದಕ್ಕಾಗಿ ೪ ಜಿಪಂ ಕ್ಷೇತ್ರ ಕಡಿತ ಮಾಡಲಾಗಿದೆ. ಗುಡ್ಡಗಾಡು ಜಿಲ್ಲೆಯಾಗಿರುವುದರಿಂದ ಜಿಪಂ ಕ್ಷೇತ್ರ ಯಥಾಸ್ಥಿತಿ ಉಳಿಸಿಕೊಳ್ಳಬೇಕು ಅಥವಾ ಹೆಚ್ಚು ಮಾಡಬೇಕೆಂದು ಒತ್ತಾಯಿಸಿ ದರು.

ಕಾಂಗ್ರೆಸ್ ಹಿಂದುಳಿದ ಘಟಕ ಜಿಲ್ಲಾಧ್ಯಕ್ಷ ಬಾನಂಡ ಪ್ರತ್ಯು, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಮುಡಿ ಹಂಸ, ಯುವ ಕಾಂಗ್ರೆಸ್ ಮುಖಂಡ ಆಫ್ರಜ್ ಗೋಷ್ಠಿಯಲ್ಲಿದ್ದರು.