ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಈರಣ್ಣ ಕಡಾಡಿ ಒಂದು ಕೋಟಿ ರೂ. ಚರಾಸ್ತಿ, 1.33 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದರೆ, ಅಶೋಕ್ ಗಸ್ತಿಗೆ ಕಾರು ಇಲ್ಲ, ಮನೆಯೂ ಇಲ್ಲ!
ರಾಯಚೂರಿನ ಅಶೋಕ್ ಗಸ್ತಿ ಬಳಿ 1 ಲಕ್ಷ ರೂ. ನಗದು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 6,273 ರೂ. ಇದೆ. 1.5 ಲಕ್ಷ ರೂ. ಮೌಲ್ಯದ ಎಲ್ಐಸಿ ಪಾಲಿಸಿ, 25 ಸಾವಿರ ರೂ. ಮೌಲ್ಯದ ಒಂದು ದ್ವಿಚಕ್ರ ವಾಹನ ಹೊಂದಿದ್ದು, ಸಾಲವೂ ಇಲ್ಲ, ಸ್ಥಿರಾಸ್ತಿಯೂ ಇಲ್ಲ.
ಇವರ ಪತ್ನಿ ಸುಮಾ ಬಳಿ ನಗದು 50 ಸಾವಿರ ರೂ., ಉಳಿತಾಯ ಖಾತೆಯಲ್ಲಿ 8006 ರೂ. ಇದೆ. ಒಂದು ಲಕ್ಷ ರೂ. ಮೌಲ್ಯದ ಎಲ್ಐಸಿ ಪಾಲಿಸಿ, ಮದುವೆಯಲ್ಲಿ ಉಡುಗೊರೆಯಾಗಿ ಬಂದ 50 ಗ್ರಾಂ ಚಿನ್ನಾಭರಣ, 1000 ಗ್ರಾಂ ಬೆಳ್ಳಿ, 8 ಲಕ್ಷ ರೂ. ಮೌಲ್ಯದ ಒಂದು ನಿವೇಶನ ಇದೆ. ಮಗಳು ನೇಹಾ ಬಳಿ 40 ಗ್ರಾಂ ಚಿನ್ನಾಭರಣ, ಇನ್ನೊಬ್ಬ ಮಗಳು ನಿತ್ಯಾ ಬಳಿ 1 ಲಕ್ಷ ರೂ. ಮೌಲ್ಯದ ಎಲ್ಐಸಿ ಬಾಂಡ್, 20 ಗ್ರಾಂ ಚಿನ್ನವಿದೆ.
ಈರಣ್ಣ ಕಡಾಡಿ ಬಳಿ ನಗದು 2 ಲಕ್ಷ ರೂ., ಉಳಿತಾಯ ಖಾತೆಗಳಲ್ಲಿ 21.86 ಲಕ್ಷ, 14.13 ಲಕ್ಷ ರೂ. ಠೇವಣಿ ಇದೆ ಇದೆ. ಬಾಂಡ್, ಷೇರು ಮೌಲ್ಯ1.3 ಲಕ್ಷ ರೂ., ಪಾಲಿಸಿ ಮೌಲ್ಯ 1.5 ಲಕ್ಷ ರೂ. ಇದೆ. ಇವರು 16 ಲಕ್ಷ ರೂ. ಮೌಲ್ಯದ ಇನ್ನೋವ ವಾಹನ, 60 ಗ್ರಾಂ ಚಿನ್ನಾಭರಣ, 1 ಪೆಟ್ರೋಲ್ ಬಂಕ್ ಹೊಂದಿದ್ದಾರೆ. 5.18 ಎಕರೆ ಜಮೀನು, 8 ನಿವೇಶನ, ಬೆಳಗಾವಿಯಲ್ಲಿ 1 ಮನೆ ಇದೆ. ಜತೆಗೆ 1.9 ಲಕ್ಷ ರೂ. ಸಾಲವೂ ಇದೆ. ಪತ್ನಿ ಸುಮಿತ್ರಾ ಕಡಾಡಿ 5.22 ಲಕ್ಷ ರೂ. ಠೇವಣಿ, 1 ಲಕ್ಷ ಮೌಲ್ಯದ ಎಲ್ಐಸಿ ಪಾಲಿಸಿ, 100 ಗ್ರಾಂ ಚಿನ್ನಾಭರಣ, 3 ಎಕರೆ ಐದು ಗುಂಟೆ ಜಮೀನು, 1 ಲಕ್ಷ ರೂ. ಸಾಲ ಹೊಂದಿದ್ದಾರೆ. ಪುತ್ರ ಸತೀಶ್ ಎಫ್ಡಿ 7.73 ಸಾವಿರ ರೂ., 1.50 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್, 40 ಗ್ರಾಂ ಚಿನ್ನಾಭರಣ, 4 ಎಕರೆ ಜಮೀನು, 1 ನಿವೇಶನ ಹೊಂದಿದ್ದಾರೆ. ಎರಡನೇ ಪುತ್ರ ಸಂಜಯ್ ಕಡಾಡಿ 7.23 ಲಕ್ಷ ರೂ. ಠೇವಣಿ, 20 ಗ್ರಾಂ ಚಿನ್ನಾಭರಣ, 4 ಎಕರೆ ಜಮೀನು ಹೊಂದಿದ್ದಾರೆ. ಈರಣ್ಣ ಕಡಾಡಿ ಬಳಿ 60 ಸಾವಿರ ರೂ. ಮೌಲ್ಯದ ರಿವಾಲ್ವರ್ ಇರುವುದನ್ನೂ ಅಫಿಡವಿಟ್ನಲ್ಲಿ ದಾಖಲಿಸಿದ್ದಾರೆ.