ನ್ಯೂಸ್

ಮೀಮ್​ಗಳಲ್ಲಿ ಕಾಣಿಸಿಕೊಳ್ಳುವ ಈಕೆ​ ಯಾರು ಗೊತ್ತಾ? ಕಿರುಚುತ್ತಾ ಹಾಡುವುದೇಕೆ? ಇಲ್ಲಿದೆ ಅಚ್ಚರಿ ಕಾರಣ...

ನವದೆಹಲಿ: ಮೇಮರ್‌ಗಳು, ಸಾಮಾನ್ಯ ಜನರು ಅಥವಾ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಮೀಮ್‌ಗಳಲ್ಲಿ ಬಳಸುತ್ತಾರೆಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ವಿಡಿಯೋಗಳು ಒಂದು ಹಂತದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಜ್ಯೋತಿ ನೂರಾನ್ ಕೂಡ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಈಕೆಯ ಬಗ್ಗೆ ಗೊತ್ತಿಲ್ಲದೇ ಹಲವರು ಈಕೆಯನ್ನು ಟ್ರೋಲ್ ಮಾಡುತ್ತಲೇ ಇದಾರೆ ಮತ್ತು ಮೀಮ್‌ಗಳಲ್ಲಿ ಕಾಮಿಡಿ ಮಾಡುತ್ತಲೇ ಇದಾರೆ. ಏಕೆಂದರೆ, ಈಕೆ ಜೋರಾಗಿ ಕಿರುಚುತ್ತಾ ಮತ್ತು ಕೈ ಚಪ್ಪಾಳೆ ತಟ್ಟುತ್ತಾ ಹಾಡುತ್ತಾಳೆ. ಹಲವರು ಇದನ್ನು ಕಾಮಿಡಿಯಾಗಿ ತೋರಿಸುತ್ತಿದ್ದಾರೆ. ಆದರೆ ಹೀಗೆ ಹಾಡಲು ಒಂದು ಕಾರಣವೂವಿದೆ. ಆ ಕಾರಣವನ್ನು ತಿಳಿದುಕೊಳ್ಳುವ ಮೊದಲು ನಾವು ಅವಳ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಹೀಗಾಗಿ ಆಕೆಯ ಹಿನ್ನೆಲೆ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಈಕೆಯ ಹೆಸರು ಜ್ಯೋತಿ ನೂರಾನ್. ಮೂಲತಃ ಈಕೆ ಗಾಯಕಿ. ದೈವಿಕ ಹಾಡುಗಳನ್ನು ಮಾತ್ರ ಹಾಡತ್ತಾಳೆ. ಈಕೆಗೆ ಓರ್ವ ತಂಗಿ ಇದ್ದಾಳೆ. ಆಕೆಯ ಹೆಸರು ಸುಲ್ತಾನ ನೂರಾನ್. ನೂರಾನ್​ ಸಹೋದರಿಯರೆಂದೇ ಫೇಮಸ್​. ಇಬ್ಬರೂ ಒಟ್ಟಿಗೆ ಆಧ್ಯಾತ್ಮಿಕ ಹಾಡುಗಳನ್ನು ಮಾತ್ರ ಹಾಡುತ್ತಾರೆ. ಇಬ್ಬರು ಕೂಡ ಸಂಗೀತ ಕುಟುಂಬದಿಂದ ಬಂದವರು. ತಲೆಮಾರುಗಳಿಂದಲೂ ಆಧ್ಯಾತ್ಮಿಕ ಹಾಡುಗಳನ್ನು ಹಾಡುತ್ತಾ ಬರುತ್ತಿದ್ದಾರೆ. ಈ ಸಹೋದರಿಯರು ಗಾಯನವನ್ನೇ ತಮ್ಮ ವೃತ್ತಿಯಾಗಿ ಆರಿಸಿಕೊಂಡಿದ್ದಾರೆ. ಆದರೆ, ಸಿನಿಮಾ ಹಾಡುಗಳನ್ನು ಹಾಡಿದರೆ ಕೈತುಂಬಾ ಹಣ ಸಿಗುತ್ತದೆ ಎಂಬ ಆಸೆಯಿಂದ ಆ ದಾರಿಗೆ ಹೋಗಲಿಲ್ಲ. ಅಪ್ಪನಿಗೆ ಕೊಟ್ಟ ಮಾತನ್ನು ಪಾಲಿಸುತ್ತಾ, ದೇವರಿಗೆ ಸಂಬಂಧಿಸಿದ ಹಾಡುಗಳನ್ನೇ ಹಾಡುತ್ತಿದ್ದಾರೆ.

ನೂರಾನ್ ಸಹೋದರಿಯರು ಪಂಜಾಬ್ ರಾಜ್ಯದ ಜಲಂಧರ್ ಗ್ರಾಮಕ್ಕೆ ಸೇರಿದವರು. ಹತ್ತು ವರ್ಷಗಳ ಕಾಲ ತಮ್ಮ ತಂದೆಯಿಂದ ಆಧ್ಯಾತ್ಮಿಕ ಹಾಡುಗಳನ್ನು ಹಾಡಲು ಕಲಿತರು. ಅವರು 17ನೇ ಶತಮಾನದ ಜನಪ್ರಿಯ ಕವಿ ಬುಲ್ಲೆಹ್ ಷಾ ಅವರ ಕವಿತೆಗಳಿಂದ ಪ್ರಭಾವಿತರಾದರು. ಆದ್ದರಿಂದ ಅವರು ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ವೃತ್ತಿ ಜೀವನ ನಿಮಿತ್ತ ಮುಂಬೈಗೆ ಹೋದರು. ಅಲ್ಲಿ ಅವರಿಗೆ ಸಾಕಷ್ಟು ಅವಕಾಶಗಳು ಬಂದವು. ಎಂಟಿವಿಯಲ್ಲಿ ಸೌಂಡ್ ಟ್ರಿನ್ ಶೋನಲ್ಲಿ ತುಂಗ್ ತುಂಗ್ ಹಾಡನ್ನು ಪ್ರದರ್ಶಿಸಲಾಯಿತು. ಇದರೊಂದಿಗೆ ಅವರು ಒಮ್ಮೆಗೆ ಜನಪ್ರಿಯರಾದರು. ಪಂಜಾಬಿ ಮತ್ತು ಭಾರತೀಯ ಸಂಗೀತ ಉದ್ಯಮದಲ್ಲಿ ಅನೇಕ ಹಾಡುಗಳೊಂದಿಗೆ ಪ್ರಸಿದ್ಧರಾದರು. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಿದರು. ಆದರೂ ಹಿಂದೆ ಸರಿಯಲಿಲ್ಲ. ಅವಕಾಶ ಸಿಕ್ಕರೂ ಹಣಕ್ಕಾಗಿ ಸಿನಿಮಾ ಹಾಡುಗಳನ್ನು ಹಾಡುವ ಮನಸ್ಸಿರಲಿಲ್ಲ. ತಮ್ಮ ಜೀವನ ಭಗವಂತನಿಗೆ ಮುಡಿಪಾಗಿದೆ ಎಂದು ಆಧ್ಯಾತ್ಮಿಕ ಗೀತೆಗಳನ್ನು ಹಾಡುತ್ತಿದ್ದಾರೆ. ಈಗಲೂ ಅದೇ ಮಾತಿನ ಮೇಲೆ ನಿಂತಿದ್ದಾರೆ.

ಅಂದಹಾಗೆ ಜ್ಯೋತಿ ನೂರಾನ್ ಹಾಡುವಾಗ ಜೋರಾಗಿ ಹಾಡುತ್ತಾ ಕೈ ಚಪ್ಪಾಳೆ ತಟ್ಟುತ್ತಾರೆ. ಏಕೆಂದರೆ ಹೀಗೆ ಹಾಡುವುದರಿಂದ ಅವರಿಗೆ ಶಕ್ತಿ ಬರುತ್ತದೆ. ತಾಸುಗಟ್ಟಲೆ ಲೈವ್ ಆಗಿ ಹಾಡುತ್ತಿರಬೇಕು. ಅಲ್ಲದೆ, ತಮಗೂ ತಮ್ಮ ಪಕ್ಕದಲ್ಲಿದ್ದ ಸಂಗೀತಗಾರರಿಗೂ ಉತ್ಸಾಹ, ಚೈತನ್ಯ ತುಂಬಲು ಹೀಗೆ ಕೂಗಿ ಚಪ್ಪಾಳೆ ತಟ್ಟುತ್ತಾರೆ. ಇದು ಅನೇಕ ಸಂಗೀತಗಾರರಲ್ಲಿ ಸಾಮಾನ್ಯವಾಗಿದೆ. ಹೀಗೆ ಹಾಡುವುದು, ಚಪ್ಪಾಳೆ ತಟ್ಟುವುದು ಹಾಡುಗಾರರಿಗೆ, ಸಂಗೀತಗಾರರಿಗೆ ಮತ್ತು ಕೇಳುಗರಿಗೆ ಉತ್ಸಾಹವನ್ನು ನೀಡುತ್ತದೆ. ಇದಾವುದನ್ನೂ ತಿಳಿಯದೆ ಅನೇಕರು ಇದನ್ನು ಕಾಮಿಡಿಯಾಗಿ ಮೀಮ್‌ಗಳಲ್ಲಿ ಬಳಸುತ್ತಿದ್ದಾರೆ. (ಏಜೆನ್ಸೀಸ್​)