ನ್ಯೂಸ್

ಮಾಸ್ಕ್​ ಧರಿಸದೆ ಮುಂಬೈ ಜನ ಎಷ್ಟು ಕೋಟಿ ದಂಡ ಕಟ್ಟಿದ್ದಾರೆ ಗೊತ್ತ ?!

ಮುಂಬೈ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ತೊಡದಿರುವುದರಿಂದ ಜನರು ಭಾರೀ ಹಾನಿ ಅನುಭವಿಸುತ್ತಿದ್ದಾರೆ. ಕೇವಲ ಕರೊನಾ ರೋಗಕ್ಕೆ ತಮ್ಮನ್ನೇ ತಾವು ಒಡ್ಡಿಕೊಳ್ಳುತ್ತಿರುವುದಷ್ಟೇ ಅಲ್ಲ. ತಮ್ಮ ಜೇಬಿಗೆ ಕೂಡ ಕತ್ತರಿ ಹಾಕಿಸಿಕೊಳ್ಳುತ್ತಿದ್ದಾರೆ. ಯಾಕಂತೀರಾ ? ಮುಂಬೈನ ಜನರು ಮಾಸ್ಕ್​ ತೊಡದೆ ಇರುವುದಕ್ಕೆ ದಂಡವಾಗಿ ತೆತ್ತಿರುವ ಕೋಟಿಗಟ್ಟಲೆ ಹಣ ಇದನ್ನು ಸಾರಿ ಹೇಳುತ್ತಿದೆ.

ಹೌದು, ಮಾಸ್ಕ್​ ತೊಡದೆ ದಂಡ ಹಾಕಿಸಿಕೊಂಡ ಮುಂಬೈಕರರು ಲಕ್ಷಾಂತರ ಜನ. ಅವರಿಂದ ಎರಡನೇ ಅಲೆ ಆರಂಭವಾದಾಗಿನಿಂದ ಮೇ 23 ರವರೆಗೆ ಬರೋಬ್ಬರಿ 55.56 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎನ್ನುತ್ತದೆ ಬೃಹನ್​ಮುಂಬೈ ನಗರ ಪಾಲಿಕೆ (ಬಿಎಂಸಿ) ವರದಿ. ಮಾಸ್ಕ್​ ತೊಡದೆ ಅಡ್ಡಾಡಿ ತಲಾ 200 ರೂ.ಗಳ ಹಾಗೆ ಇಷ್ಟೊಂದು ಮೊತ್ತವನ್ನು ಮುಂಬೈಕರರು ಕಲೆಹಾಕಿದ್ದಾರೆ.

ಒಟ್ಟು 55.56 ಕೋಟಿ ಅಥವಾ ನಿಖರವಾಗಿ ಹೇಳಬೇಕೆಂದರೆ 55,56,21,800 ರೂ.ಗಳನ್ನು ಬಿಎಂಸಿ, ಮುಂಬೈ ಪೊಲೀಸ್ ಮತ್ತು ರೈಲ್ವೇ ಇಲಾಖೆಗಳು ಕೂಡಿ ಸಂಗ್ರಹಿಸಿವೆ. ಇದರಲ್ಲಿ, 48,28,80,800 ರೂ.ಗಳನ್ನು ಬಿಎಂಸಿ ಕಟ್ಟಿಸಿಕೊಂಡಿದ್ದರೆ, ಮುಂಬೈ ಪೊಲೀಸರು 6,77,01,800 ರೂ. ಕಟ್ಟಿಸಿಕೊಂಡಿದ್ದಾರೆ. ಮತ್ತು ರೈಲ್ವೇಸ್​ನವರು 50,39,200 ರೂ. ದಂಡ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮೇ 23 ರಂದು ಮುಂಬೈನಲ್ಲಿ 28,410 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ದರ ನಿಯಂತ್ರಣದಲ್ಲಿದೆ ಎಂದು ಬಿಎಂಸಿ ಹೇಳಿದೆ. ಆದರೆ ಇದೇ ಕಾರಣಕ್ಕೆ ಕರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಉಡಾಫೆ ಮಾಡಬೇಡಿ ಎಂದು ಜನರನ್ನು ಆಗ್ರಹಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಾಸ್ಕ್​ ಬಗೆಗಿನ ಸಮೀಕ್ಷೆಯೊಂದರ ಮಾಹಿತಿ ನೀಡಿದೆ. ಆ ಪ್ರಕಾರ, ಭಾರತದಲ್ಲಿ ಅರ್ಧದಷ್ಟು ಜನ ಮಾಸ್ಕ್​ ತೊಡುತ್ತಿಲ್ಲವಂತೆ. ಹೀಗಾಗಿ ಮುಂಬೈ ಜನರೊಂದಿಗೆ ಈ ಆತ್ಮಘಾತಕ ಅಪರಾಧಕ್ಕೆ ದಂಡ ಕಟ್ಟುತ್ತಿರುವ ಜನರು ದೇಶದ ಎಲ್ಲೆಡೆ ಇದ್ದಾರೆ! (ಏಜೆನ್ಸೀಸ್)