ಬೆಂಗಳೂರು: ಕೆಲ ದಿನಗಳ ಹಿಂದೆ ಸಮಾವೇಶ ಒಂದರಲ್ಲಿ ಹಾಲಿನ (Nandini Milk) ದರ ಏರಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸುಳಿವು ನೀಡಿದ್ದರು. ಈ ವಿಚಾರ ರಾಜ್ಯ ರಾಜಕಾರಣ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಈ ಬಗ್ಗೆ ಮಾತನಾಡಿರುವ ಕೆಎಂಎಫ್ (KMF) ಅಧ್ಯಕ್ಷ ಭೀಮಾ ನಾಯ್ಕ್ (Bheema Naik) ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಭೀಮಾ ನಾಯ್ಕ್ (Bheema Naik), ಹಾಲಿನ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ. ಆದರೆ, ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯದ ರೈತರು ಬೇಡಿಕೆ ಇಟ್ಟಿದ್ದಾರೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ಆಡಳಿತಾತ್ಮಕ ತೀರ್ಮಾನ ಮಾಡುತ್ತದೆ. ದೆಹಲಿಯಲ್ಲಿ ಪ್ರತಿನಿತ್ಯ 5-6 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಮಾಡುವುದು ನಮ್ಮ ಕನಸು ಇತ್ತು. ಮುಂದಿನ ತಿಂಗಳ ವೇಳೆಗೆ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ನಿರೀಕ್ಷೆ ಇದೆ.
ನಮಗೆ ಗ್ರಾಹಕರ ಬೇಡಿಕೆ ಇದೆ, ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ. ಬ್ಯುಸಿನೆಸ್ನಲ್ಲಿ ಸ್ಪರ್ಧೆ ಇರುತ್ತದೆ. ಅವೆಲ್ಲವನ್ನೂ ಎದುರಿಸಿ ಯಶಸ್ವಿ ಆಗುತ್ತೇವೆ. ಈ ಸಂಬಂಧ ಡಿಸೆಂಬರ್ 09ರಂದು ನಾನು ಹಾಗೂ ಕೆಎಂಎಫ್ ನಿರ್ದೇಶಕರು ದೆಹಲಿಗೆ ಹೋಗುತ್ತೇವೆ. ಬೇರೆ ಬ್ರ್ಯಾಂಡ್ ಉತ್ಪನ್ನಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಅಮುಲ್ ಜೊತೆಗೆ ನಂದಿನಿ ವಿಲೀನ ಕುರಿತು ಮಾತನಾಡಿ, ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ. ಈ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನಲೆಯಲ್ಲಿ ವದಂತಿ ಸೃಷ್ಟಿ ಆಗಿತ್ತು. ಇದೆಲ್ಲವೂ ಒಂದು ವದಂತಿ ಅಷ್ಟೇ. ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.