ಬೆಂಗಳೂರು: ಏಳನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ, ಸೌಲಭ್ಯಗಳು ಯಥಾವತ್ ಜಾರಿಯಾಗದಿದ್ದರೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ಚಟುವಟಿಕೆಗಳು ಫೆ.1ರಿಂದ ಸ್ಥಗಿತವಾಗುವ ಸಾಧ್ಯತೆಗಳಿವೆ.
ವೇತನ ಪರಿಷ್ಕರಣೆ, ಸೌಲಭ್ಯಗಳನ್ನು ಅನ್ವಯಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಕೆಎಂಎಫ್ ಹಾಗೂ ಎಲ್ಲ ಒಕ್ಕೂಟಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕ್ರೋಶಭರಿತರಾಗಿದ್ದಾರೆ.
ಬೇಡಿಕೆ ಈಡೇರಿಸಿಕೊಳ್ಳಲು ಫೆ.1ರಿಂದ ಮುಷ್ಕರ ಹೂಡುವಂತೆ ಅಧಿಕಾರಿಗಳು ಹಾಗೂ ಒತ್ತಡ ಹೇರುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಕೆಎಂಎ್ ಅಧಿಕಾರಿಗಳ ಸಂಘ ತಿಳಿಸಿದೆ.
ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ ಜಾರಿಗೆ ತಂದರೆ ಮಹಾಮಂಡಳ ಮತ್ತು ಒಕ್ಕೂಟದ ಮೇಲೆ ಹೊರೆ ಬೀಳುವುದಿಲ್ಲ. ವಾರ್ಷಿಕ ಆಡಳಿತ ವೆಚ್ಚವು ನಿಯಮ ಪ್ರಕಾರ ಶೇ.3ರೊಳಗೆ ಇರುವಂತೆ ಈ ತನಕ ನೋಡಿಕೊಳ್ಳಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿದೆ.
ಕೆಎಂಎಫ್ ಹಾಗೂ ಒಕ್ಕೂಟಗಳು ತಮ್ಮ ವಹಿವಾಟು ಪ್ರತಿವರ್ಷ ಶೇ.10ರಷ್ಟು ವೃದ್ಧಿಸಿ, ಆಡಳಿತ ವೆಚ್ಚ ಶೇ.2ರೊಳಗೆ ಬರುವಂತೆ ಗರಿಷ್ಠ ಪ್ರಯತ್ನ ಮಾಡುತ್ತಿವೆ. ಎಲ್ಲ ಬೆಲೆಗಳು ಏರಿಕೆಯ ಕಾರಣದಿಂದಾಗಿ ವಾರ್ಷಿಕ ಆಡಳಿತ ವೆಚ್ಚವನ್ನು ಶೇ.4 ರಿಂದ 5ಕ್ಕೆ ಹೆಚ್ಚಿಸಲು ಕಳುಹಿಸಿದ ಪ್ರಸ್ತಾವನೆಗಳಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಧಿಕಾರಿಗಳ ಸಂಘ ಬೇಸರ ವ್ಯಕ್ತಪಡಿಸಿದೆ.
ಏಳನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ಶ್ರೇಣಿ, ವೇತನ, ಸೌಲಭ್ಯಗಳನ್ನು 1-8-2024ರಿಂದ ಅನ್ವಯಿಸಿ ಜಾರಿಗೊಳಿಸಲು ಆದೇಶಿಸಲಾಗಿದೆ. ಆದರೆ ತಾಂತ್ರಿಕ ಅಡಚಣೆ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಅನ್ವಯಿಸಲು ಹಿಂದೇಟು ಹಾಕಲಾಗುತ್ತಿದೆ.
ಕಳೆದ 2-3 ತಿಂಗಳಿಂದ ಒತ್ತಾಯಿಸುತ್ತಲೇ ಬಂದರೂ ಸಹಕಾರ ಇಲಾಖೆ ಸ್ಪಂದಿಸಿಲ್ಲ. ಫೆ.1ರಿಂದ ಮುಷ್ಕರ ಹೂಡಲು ಅಧಿಕಾರಿಗಳು, ಸಿಬ್ಬಂದಿ ಒತ್ತಡ ಹೇರಿದ್ದಾರೆ. ಆದಷ್ಟು ಸಮಸ್ಯೆ ಬಗೆಹರಿಸಲು ಕೆಎಂಎಫ್ ಅಧಿಕಾರಿಗಳ ಸಂಘ ಕೋರಿದೆ.