ಬೆಳಗಾವಿ: ಕ್ಯಾನ್ಸರ್ ರೋಗ ತಡೆಗಟ್ಟಲು ಜಗತ್ತಿನಲ್ಲಿ ಏನೆಲ್ಲ ಚಿಕಿತ್ಸೆ ಇವೆಯೋ ಆ ಎಲ್ಲ ಚಿಕಿತ್ಸೆಗಳು ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ನಿಮಿಷಕ್ಕೆ ಮೂವರು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. 2006ರಿಂದಲೇ ಕ್ಯಾನ್ಸರ್ ಸೇವೆ ನೀಡುತ್ತಿರುವ ಕೆಎಲ್‌ಇ ಆಸ್ಪತ್ರೆಗೆ ಪ್ರತಿದಿನ 15-20 ರೋಗಿಗಳು ದಾಖಲಾಗುತ್ತಿದ್ದಾರೆ. ಬಡ ರೋಗಿಗೂ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ಸಿಗಬೇಕೆನ್ನುವ ಉದ್ದೇಶದಿಂದ ನೂತನವಾಗಿ ಅತ್ಯಾ ಧುನಿಕ ಕ್ಯಾನ್ಸರ್ ಆಸ್ಪತ್ರೆ ನಿರ್ಮಿ ಸಲಾಗಿದ್ದು, ಡಿ.30ರಂದು ಜನಸೇವೆಗೆ ಅರ್ಪಣೆಯಾಗಲಿದೆ ಎಂದರು.
ಜೀವನ ಶೈಲಿ ಬದಲಾಗಲಿ: ವಿದ್ಯಾರ್ಥಿಗಳಲ್ಲಿ ದೈಹಿಕ ಚಟುವಟಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಗಳಲ್ಲಿ ಕಾರು, ಬೈಕ್ ಬಳಕೆ ನಿಯಂತ್ರಿಸಲಾಗುತ್ತಿದೆ. ಮಕ್ಕಳ ಆರೋಗ್ಯ ವಿಷಯದಲ್ಲಿ ಪಾಲಕರು ಎಚ್ಚರಿಕೆ ವಹಿಸಬೇಕಿದ್ದು, ಜೀವನ ಶೈಲಿ ಹಾಗೂ ಪಾರಂಪರಿಕ ಆಹಾರ ಸಂಸ್ಕೃತಿ ಬದಲಾಗುತ್ತಿರುವುದು ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವುದರಿಂದ ನಿಯಮಿತ ದೈಹಿಕ ಚಟುವಟಿಕೆ ರೂಢಿಸಿಕೊಂಡು, ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಸಿಇಒ ಡಾ. ಎಂ.ವಿ.ಜಾಲಿ ಮಾತನಾಡಿ, ದೇಶದಲ್ಲಿ ಪ್ರತಿವರ್ಷ 15 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, 2040ರ ಹೊತ್ತಿಗೆ ಕ್ಯಾನ್ಸರ್ ಪೀಡಿತರ ಸಂಖ್ಯೆ ದ್ವಿಗುಣವಾಗುತ್ತದೆ. ಹಾಗಾಗಿ, ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಮಹತ್ವ ನೀಡಬೇಕು. ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್. ಸಾಧುನವರ, ಜೆಎನ್ ವೈದ್ಯಕೀಯ ಕಾಲೇಜ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ತಜ್ಞವೈದ್ಯರಾದ ಡಾ.ಕುಮಾರ ವಿಂಚುರಕರ, ಡಾ.ರಾಜೇಂದ್ರ ಮೆಟಗುಡಮಠ, ಡಾ. ರೋಹನ ಭಿಸೆ ಸುದ್ದಿಗೋಷ್ಠಿಯಲ್ಲಿದ್ದರು.
ಮುಂಬಯಿ ಸೇರಿ ದೇಶದ ವಿವಿಧೆಡೆ ಕ್ಯಾನ್ಸರ್‌ಗೆ ಸಕಾಲದಲ್ಲಿ ಚಿಕಿತ್ಸೆ ದಾಖಲಾಗದೆ ರಸ್ತೆಗಳಲ್ಲಿ ಮಲಗುವ ಪರಿಸ್ಥಿತಿ ಇಂದಿಗೂ ಇದೆ. ಇಂತಹ ಸಂಕಷ್ಟಗಳನ್ನು ದೂರು ಮಾಡುವ ನಿಟ್ಟಿನಲ್ಲಿ 300 ಕೋಟಿ ರೂ.ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲಾಗಿದ್ದು, 150 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಆಸ್ಪತ್ರೆ ಹೊಂದಿದೆ. ಮಕ್ಕಳಲ್ಲೂ ಕ್ಯಾನ್ಸರ್ ರೋಗ ಹೆಚ್ಚುತ್ತಿರುವುದರಿಂದ ಆಸ್ಪತ್ರೆಯಲ್ಲಿ ಪ್ರತ್ಯೇಕ ಮಕ್ಕಳ ವಿಭಾಗ ತೆರೆಯಲಾಗಿದೆ. ಪರಿಣಿತ ತಜ್ಞ ವೈದ್ಯರ ತಂಡ ಸೇವೆ ನೀಡುತ್ತಿದೆ. ಬಡ ರೋಗಿಗಳಿಗೆ ಕೇಂದ್ರ ಮತ್ತು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ ಸರ್ಕಾರಗಳ ವಿವಿಧ ವಿಮೆ ಯೋಜನೆಗಳಡಿ ಚಿಕಿತ್ಸೆ ಲಭ್ಯವಿದೆ ಎಂದು ಡಾ. ಪ್ರಭಾಕರ ಕೋರೆ ತಿಳಿಸಿದರು.
ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ರೋಗ ಪೀಡಿತ ಸ್ಥಳಕ್ಕೆ ನಿಖರ ಚಿಕಿತ್ಸೆ ನೀಡುವ ರೇಡಿಯೇಶನ್ ಸೌಲಭ್ಯ ಲಭ್ಯವಿದ್ದು, ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರಿಂದ ದೇಹದ ಇತರ ಭಾಗಗಳಿಗೆ ಯಾವುದೇ ತೊಂದರೆ ಆಗದು. | ಡಾ.ಇಮ್ತಿಯಾಜ್ ತಜ್ಞ ವೈದ್ಯ 18 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗ ನಿರ್ಮಾಣ ಮಾಡಲಾಗಿದ್ದು, ಮನೆ ಆರೈಕೆ ಮಾದರಿಯಲ್ಲಿ ಮಕ್ಕಳ ಸ್ನೇಹಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. | ಡಾ.ಅಭಿಲಾಷಾ ತಜ್ಞ ವೈದ್ಯೆ