ಬೆಂಗಳೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೊಸ ರೂಪ ಕೊಡಲು ಮತ್ತು ಉದ್ದೇಶಿತ ಕಾರ್ಯಕ್ಕೆ ವೇಗ ನೀಡಲು ಸರ್ಕಾರ ಸಂಕಲ್ಪ ಮಾಡಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದ್ದು, ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಪ್ರಾಧಾನ್ಯತೆ ನೀಡಲು ನಿರ್ಣಯಿಸಲಾಗಿದೆ.
ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮುಂದಿನ ಎರಡು ವರ್ಷಗಳನ್ನು ‘ಶೈಕ್ಷಣಿಕ ವರ್ಷ’ ಎಂದು ಘೋಷಿಸಿ, ಮಂಡಳಿಗೆ ಹಂಚಿಕೆಯಾದ ಶೇ.25ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿಯೇ ವೆಚ್ಚ ಮಾಡಲು ತೀರ್ಮಾನಿಸಲಾಯಿತು.
ಈ ಮೂಲಕ ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿನ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಕ್ರಮಕೈಗೊಳ್ಳಲು ಆದ್ಯತೆ ನೀಡಲಾಗುತ್ತದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 41 ಮಹಿಳಾ ಪದವಿ ಕಾಲೇಜು ಪ್ರಾರಂಭಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಇದೇ ವೇಳೆ ಸೂಚನೆ ನೀಡಿದರು.
ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಆಡಳಿತ ಇಲಾಖೆಗಳು ಮಂಜೂರಾತಿ ನೀಡಬೇಕೆಂದು ನಿರ್ದೇಶನ ನೀಡಿದರಲ್ಲದೇ, ಸಿಎಸ್‌ಆರ್ ಅಡಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಹಾಗೆಯೇ, ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ತೀವ್ರ ಕೊರತೆ ಇದ್ದು, ಶೀಘ್ರವೇ ಹುದ್ದೆ ಭರ್ತಿಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಜನೆಗೆ ಹೆಚ್ಚು ಒತ್ತು ನೀಡಬೇಕು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬೇಡಿಕೆ ಇದ್ದು, ಇದಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು. ಜತೆಗೆ ನಿಗದಿತ ಮಾನದಂಡಗಳಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಇದೇ ವೇಳೆ ತಿಳಿಸಿದರು.
ಅರಣ್ಯೀಕರಕ್ಕೆ ಮತ್ತು ಶುದ್ಧ ಕುಡಿಯುವ ನೀರು, ಚೆಕ್ ಡ್ಯಾಂಗಳಿಗೆ ಆಧ್ಯತೆ ನೀಡುವ ಮೂಲಕ ಅಂತರ್ಜಲ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡು, ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.
ಮಂಡಳಿ ವ್ಯಾಪ್ತಿಯ ಕೆಲವು ಕ್ಷೇತ್ರಗಳು ಪ್ರಗತಿ ಹಾದಿಯಲ್ಲಿದೆ. ಹೀಗಾಗಿ ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆಯೋ ಆ ಕ್ಷೇತ್ರಗಳಿಗೆ ಒತ್ತು ನೀಡಬೇಕು. ಹಾಸ್ಟೆಲುಗಳು, ಅಂಗನವಾಡಿ ಹಾಗೂ ವಸತಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಲಭ್ಯ ಅನುದಾನವನ್ನು ರಸ್ತೆ, ಕುಡಿಯುವ ನೀರು, ನೀರಾವರಿ ಮತ್ತಿತರ ಮೂಲಸೌಕರ್ಯಗಳಿಗೆ ಆದ್ಯತೆ ಕೊಡಬೇಕು ಎಂದರು.
ಕ್ರಿಯಾ ಯೋಜನೆ
ಈ ವರ್ಷದ ಆಯವ್ಯಯದಲ್ಲಿ ವರ್ಷಕ್ಕೆ 5,000 ಕೋಟಿ ರೂ. ಒದಗಿಸುವುದಾಗಿ ೋಷಿಸಲಾಗಿತ್ತು, ಈ ಮೊತ್ತವನ್ನು ವೆಚ್ಚ ಮಾಡಲು ಅನುವಾಗುವಂತೆ ಜುಲೈ 15 ರೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಿಎಂ ಸೂಚನೆ ನೀಡಿದರು.
ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಕಾಣುವ ರೀತಿಯಲ್ಲಿ ಫಲಿತಾಂಶ ಬರುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಬೇಕು.
ಕಲ್ಯಾಣ ಕರ್ನಾಟಕ ಭಾಗದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದಿದ್ದು, ಈ ಜಿಲ್ಲೆಗಳನ್ನು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾಮಗಾರಿಗೆ ವೇಗ
ಈಗ ಅನುಮೋದನೆಯಾದ ಹಾಗೂ ಟೆಂಡರ್ ಕರೆಯದೆ ಇರುವ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಬೇಕು. ಜತೆಗೆ ಕಾಮಗಾರಿ ನಡೆದರಷ್ಟೇ ಸಾಲದು ಕಾಮಗಾರಿಗಳ ಮೌಲ್ಯಮಾಪನ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಒಟ್ಟು 14,228 ಕೋಟಿ ಅನುದಾನದಲ್ಲಿ 10,342.90 ಕೋಟಿ ರೂ. ವೆಚ್ಚವಾಗಿದೆ. 2885.90 ಕೋಟಿ ರೂ. ಹಾಗೆಯೇ ಉಳಿದಿದೆ. ಬಾಕಿ ಉಳಿದ ಕಾಮಗಾರಿಗಳ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ, ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು ಎಂದು ಮಂಡಳಿಗೆ ತಿಳಿಸಿದರು.
ಬಾಕಿ ಉಳಿದಿರುವ 3528 ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪ್ರಾರಂಭಿಸಬೇಕು, ಆದ್ಯತೆ ಮೇಲೆ ಅದು ಪೂರ್ಣಗೊಳ್ಳುವಂತೆ ಕ್ರಮಕೈಗೊಳ್ಳಬೇಕೆಂದರು.
ಸಭೆಯಲ್ಲಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್, ಸಚಿವ ಈಶ್ವರ ಖಂಡ್ರೆ, ಶರಣ ಪ್ರಕಾಶ್ ಪಾಟೀಲ್, ಬೋಸರಾಜು, ರಹೀಂ ಖಾನ್, ಜಮೀರ್ ಅಹ್ಮದ್, ಡಿ.ಸುಧಾಕರ್, ಶರಣಬಸಪ್ಪ ದರ್ಶನಾಪೂರ, ಶಿವರಾಜ್ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರರಾದ ಬಿ.ಆರ್. ಪಾಟೀಲ್, ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಮತ್ತಿತರರು ಸಮಾಲೋಚನೆ ನಡೆಸಿದರು.
ಸಭೆಯ ಸಾರ
1. ಜುಲೈ 15 ರೊಳಗೆ ಕ್ರಿಯಾ ಯೋಜನೆ ಕೂಡಲೇ ಸಿದ್ಧ ಪಡಿಸಲು ಸಿಎಂ ಸೂಚನೆ
2. 5 ಸಾವಿರ ಕೋಟಿ ವೆಚ್ಚ ಮಾಡಲು ಅನುವಾಗುವಂತೆ ಕ್ರಿಯಾ ಯೋಜನೆ
3. ಬಾಕಿ ಉಳಿದಿರುವ 3528 ಕಾಮಗಾರಿ ಜುಲೈ ಅಂತ್ಯದೊಳಗೆ ಪ್ರಾರಂಭಿಸಬೇಕು
4. 41 ಮಹಿಳಾ ಪದವಿ ಕಾಲೇಜು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ
5. ಪ್ರಗತಿ ಕಾಣುವ ರೀತಿಯಲ್ಲಿ ಫಲಿತಾಂಶ ಬರುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ