ಶಿವಮೊಗ್ಗ: ಹೈನುಗಾರರಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಶಿಮುಲ್‌ನಿಂದ (ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ) ಉಚಿತವಾಗಿ ಮೇವಿನ ಬೀಜಗಳ ಕಿಟ್ ವಿತರಣೆ ಮಾಡಲಾಗುತ್ತಿದೆ. ಹಸಿರು ಮೇವು ಬಳಸುವುದರಿಂದ ಹಾಲಿನ ಉತ್ಪಾದನೆಯೂ ಹೆಚ್ಚಾಗಿ ಹೈನುಗಾರರು ಆರ್ಥಿಕ ಲಾಭ ಪಡೆಯಬಹುದು ಎಂಬುದು ಒಕ್ಕೂಟದ ಚಿಂತನೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ತಿಳಿಸಿದ್ದಾರೆ.
ಶಿಮುಲ್‌ನಿಂದ 1.20 ಕೋಟಿ ರೂ. ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ವಿವಿಧ ಮೇವಿನ ತಳಿಗಳ ಬೀಜಗಳು ಹೈನುಗಾರರಿಗೆ ದೊರೆಯಲಿದೆ. ಕಳೆದ ಸಾಲಿನಲ್ಲಿ ಬರದ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಕಡಿಮೆಯಾದ ಕಾರಣ ರೈತರು ನಷ್ಟ ಅನುಭವಿಸುವಂತಾಗಿತ್ತು. ಹೀಗಾಗಿ ಮೂರು ಹಾಗೂ ಐದು ಕೆಜಿ ಪ್ರಮಾಣದಲ್ಲಿ ಮೇವಿನ ಕಿಟ್ ನೀಡಲಾಗುತ್ತಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆಯಾಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಯೋಜನೆ ನಿಯಮದಂತೆ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.
ಯೋಜನೆಯ ನಿಬಂಧನೆ ಅನುಸಾರ ಸಾಮಾನ್ಯ ವರ್ಗದವರಿಗೆ ಶೇ. 70, ಪರಿಶಿಷ್ಟ ಜಾತಿ ಶೇ. 20 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 10ರಷ್ಟು ಮೇವಿನ ಕಿಟ್‌ಗಳನ್ನು ಹಾಲು ಶೇಖರಣೆ ಆಧಾರದ ಮೇಲೆ ವಿತರಿಸಲಾಗುತ್ತದೆ.