- ಕೀರ್ತಿ ಕುಲ್ಹರಿ ಕ್ರೆಡಿಟ್ ಕಾರ್ಡ್ ಬಳಸಿ 2.44 ಲಕ್ಷ ರೂ. ಕದ್ದ ಖದೀಮರು
- ವಂಚನೆ ಗಮನಕ್ಕೆ ಬಂದ ಕೂಡಲೇ ಕಾರ್ಡ್ ಬ್ಲಾಕ್ ಮಾಡಿಸಿದ ನಟಿ
- ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು, ತನಿಖೆ ನಡೆಸಿದ ಅಧಿಕಾರಿಗಳು
ದೇಶದಲ್ಲಿ ಸೈಬರ್ ಕ್ರೈಂಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಾಮಾನ್ಯ ಜನರಷ್ಟೇ ಅಲ್ಲ ತಾರೆಯರು ಸಹ ವಂಚಕರಿಗೆ ಬಲಿಯಾಗುತ್ತಿದ್ದಾರೆ. ಅನ್ನು ಕಪೂರ್, ಅಕ್ಷಯ್ ಖನ್ನಾ, ಸ್ವರಾ ಭಾಸ್ಕರ್, ನರ್ಗಿಸ್ ಫಖ್ರಿ, ಶ್ವೇತಾ ಮೆನನ್ ಸೇರಿ ಹಲವರು ಈ ಸೈಬರ್ ಖದೀಮರಿಂದ ವಂಚನೆಗೊಳಗಾಗಿದ್ದಾರೆ. ಇದೀಗ ಹಿಂದಿಯ ‘ಸೈತಾನ್’ ‘ಉರಿ: ದ ಸರ್ಜಿಕಲ್ ಸ್ಟ್ರೈಕ್’ ನಟಿ ಕೀರ್ತಿ ಕುಲ್ಹರಿ ಸೈಬರ್ ವಂಚನೆಯ ಸಂತ್ರಸ್ಥೆಯಾಗಿದ್ದಾರೆ. ನಟಿಯ ಕ್ರೆಡಿಟ್ ಕಾರ್ಡ್‌ನ ಮಾಹಿತಿಗಳನ್ನು ಕಳ್ಳತನದಿಂದ ಸಂಗ್ರಹಿಸಿ, ಅಕೌಂಟ್‌ನಲ್ಲಿದ್ದ 2.44 ಲಕ್ಷ ರೂ. ಹಣವನ್ನು ಖದೀಮರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ವಂಚನೆ ಪ್ರಕರಣ ಗಮನಕ್ಕೆ ಬಂದ ಕೂಡಲೇ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ 24ರಂದು ಪಶ್ಚಿಮ ಅಂಧೇರಿಯ ಮಲ್ಟಿಪ್ಲೆಕ್ಸ್‌ಗೆ ಸಿನಿಮಾ ನೋಡಲು ತೆರಳುತ್ತಿದ್ದರಂತೆ. ಆಗ ಅವರ ಕ್ರೆಡಿಟ್ ಕಾರ್ಡ್‌ನಿಂದ 2,525 ಅಮೆರಿಕನ್ ಡಾಲರ್ (2.44 ಲಕ್ಷ ರೂ.) ವರ್ಗಾವಣೆಯಾಗಿರುವ ಸಂದೇಶ ಮೊಬೈಲ್‌ಗೆ ಬಂದಿದೆ. ಅದರಿಂದ ಆತಂಕಗೊಂಡ ನಟಿ ಕೂಡಲೇ ಬ್ಯಾಂಕ್‌ನ ಗ್ರಾಹಕರ ಸೇವೆಗೆ ಕರೆ ಮಾಡಿ, ಮಾಹಿತಿ ಕೇಳಿದ್ದಾರೆ. ಕ್ರೆಡಿಟ್ ಕಾರ್ಡ್‌ನಿಂದ ನಾಲ್ಕು ಬೇರೆ ಬೇರೆ ಅಕೌಂಟ್‌ಗಳಿಗೆ ಹಣ ವರ್ಗಾವಣೆಯಾಗಿರುವುದು ಖಚಿತವಾಗಿದೆ. ಕೂಡಲೇ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿ, ವಂಚಕರ ವಿರುದ್ಧ ಕೀರ್ತಿ ದೂರು ದಾಖಲಿಸಿದ್ದಾರೆ. ಯಾವ ವ್ಯಕ್ತಿಗೂ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿಲ್ಲ ಎಂದು ವಿಚಾರಣೆಯಲ್ಲಿ ಕೀರ್ತಿ ಕುಲ್ಹರಿ ತಿಳಿಸಿದ್ದಾರೆ. ಸದ್ಯ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. -ಏಜೆನ್ಸೀಸ್