Kingdom trailer: ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಕಿಂಗ್‌ಡಮ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜೈಲಿಗೆ ಹಾಕುವ ಅಪಾಯಕಾರಿ ಕಾರ್ಯಾಚರಣೆ ಮತ್ತು ಕ್ರೂರ ಪ್ರಪಂಚದ ನೋಟವನ್ನು ಈ ಟ್ರೇಲರ್‌ನಲ್ಲಿ ಕಾಣಬಹುದು.
ಶನಿವಾರ (ಜುಲೈ27) ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಬಳಿಕ ನಟ ವಿಜಯ್ ದೇವರಕೊಂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರದದಲ್ಲಿ ವಿಜಯ್ ದೇವರಕೊಂಡ ಸೂರ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೈ-ರಿಸ್ಕ್ ಅಂಡರ್‌ಕವರ್ ಮಿಷನ್‌ನಲ್ಲಿ ಗೂಢಚಾರನಾಗಿ ಕೆಲಸ ಮಾಡುವ ಪಾತ್ರ ಇದು. ಶತ್ರು ಪ್ರದೇಶಗಳ ಒಳಗೆ ಧೈರ್ಯದಿಂದ ನುಗ್ಗುವ ಹಾಗೂ ತನಗೆ ಇಷ್ಟವಾಗಿದ್ದನ್ನೆಲ್ಲಾ ತ್ಯಜಿಸುವ ನಾಯಕನಾಗಿ ವಿಜಯ್ ದೇವರಕೊಂಡ ತೆರೆಯ ಮೇಲೆ ರಾರಾಜಿಸಲಿದ್ದಾರೆ. ಶತ್ರು ಪ್ರದೇಶಗಳ ಒಳಗೆ ನುಗ್ಗಿದಾಗ ಅಲ್ಲೊಂದು ಅಪಾಯಕಾರಿ ಪ್ರಪಂಚ ಸಾಕಷ್ಟು ಅನಿರೀಕ್ಷಿ ತಿರುವುಗಳನ್ನು ನೀಡುತ್ತದೆ. ಅದನ್ನು ನಾಯಕ ಹೇಗೆ ಎದುರಿಸುತ್ತಾನೆ ಎಂಬುದರ ಸಣ್ಣ ಝಲಕ್ ಟ್ರೈಲರ್ನಲ್ಲಿದೆ.
ಟ್ರೇಲರ್‌ನಲ್ಲಿ ಸತ್ಯದೇವ್ ಮತ್ತು ಮನೀಶ್ ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕ್ಲಿಪ್ ವಿಜಯ್ ಅವರ ತೀವ್ರವಾದ ಆಕ್ಷನ್ ಸೀಕ್ವೆನ್ಸ್‌ಗಳು ಮತ್ತು ಭಾವನಾತ್ಮಕ ಕ್ಷಣಗಳ ಮಿಶ್ರಣವನ್ನು ಒಳಗೊಂಡಿದ್ದು, ಇವೆಲ್ಲವೂ ಅನಿರುದ್ಧ್ ರವಿಚಂದರ್ ಅವರ ಸಂಗೀತಕ್ಕೆ ಹೊಂದಿಕೊಂಡಿವೆ. ಟ್ರೇಲರ್, ವಿಜಯ್ ಸಾಹಸ ದೃಷ್ಯಗಳಲ್ಲಿ ಮಾತ್ರವಲ್ಲದೆ ನಾಯಕ ಎದುರಿಸುವ ವೈಯಕ್ತಿಕ ಹೋರಾಟಗಳು ಮತ್ತು ಆಂತರಿಕ ಪ್ರಕ್ಷುಬ್ಧತೆಯನ್ನು ಸಹ ಎತ್ತಿ ತೋರಿಸುತ್ತದೆ.
ಟೀಸರ್‌ನ ತೆಲುಗು ಮತ್ತು ತಮಿಳು ಆವೃತ್ತಿಗಳಿಗೆ ಜೂನಿಯರ್ ಎನ್‌ಟಿಆರ್ ಮತ್ತು ಸೂರ್ಯ, ಹಿಂದಿ ಆವೃತಿಗೆ ರಣಬೀರ್ ಕಪೂರ್ ಧ್ವನಿ ನೀಡಿದ್ದಾರೆ,
ಜೆರ್ಸಿ ಖ್ಯಾತಿಯ ಗೌತಮ್ ತಿನ್ನನುರಿ ನಿರ್ದೇಶನದ ಮತ್ತು ಎಸ್ ನಾಗ ವಂಶಿ ನಿರ್ಮಿಸಿರುವ ಈ ಚಿತ್ರವು ಸ್ಪೈ ಥ್ರಿಲ್ಲರ್ ಎಂದು ಹೇಳಲಾಗುತ್ತಿದೆ. ಈ ಚಿತ್ರ ಜುಲೈ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್)