ಬೀಜಿಂಗ್/ಸಿಯೋಲ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ಗೆ ಆರೋಗ್ಯ ಸಂಬಂಧ ಸಲಹೆ ನೀಡಲು ವೈದ್ಯಕೀಯ ತಜ್ಞರ ಸಹಿತ ಒಂದು ತಂಡವೊಂದನ್ನು ಚೀನಾ ಕಳಿಸಿದೆ. ಚೀನಾ ಕಮ್ಯೂನಿಸ್ಟ್ ಪಕ್ಷದ ಹಿರಿಯ ಸದಸ್ಯರೊಬ್ಬರು ಈ ತಂಡದ ನೇತೃತ್ವವಹಿಸಿದ್ದು, ಗುರುವಾರವೇ ಈ ತಡ ಬೀಜಿಂಗ್ನಿಂದ ತೆರಳಿದೆ ಎನ್ನಲಾಗಿದೆ. ‘ಉಕ್ಕಿನ ಮನುಷ್ಯ’ ಕಿಮ್ ಆರೋಗ್ಯದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿರುವ ನಡುವೆ ಚೀನಾ ವೈದ್ಯರು ಮತ್ತು ಅಧಿಕಾರಿಗಳ ತಂಡವನ್ನು ಕಳಿಸಿರುವುದು ಮಹತ್ವ ಪಡೆದಿದೆ. ಕಿಮ್ ಏಪ್ರಿಲ್ 12ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆಂದು ವರದಿಯಾಗಿದೆ. ಆದರೆ, ಉತ್ತರ ಕೊರಿಯಾದಲ್ಲಿ ಯಾವುದೇ ಅಸಹಜ ಚಟುವಟಿಕೆಗಳ ಸುಳಿವು ಕಾಣಿಸಿಲ್ಲ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲಗಳೆದ ಅಮೆರಿಕ: ಕಿಮ್ ಆರೋಗ್ಯ ಗಂಭೀರವಾಗಿದೆಯೆಂಬ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಳ್ಳಿಹಾಕಿದ್ದಾರೆ. ‘ಆ ವರದಿ ಸರಿಯಿಲ್ಲ ಎಂಬುದು ನನ್ನ ಭಾವನೆ’ ಎಂದು ಟ್ರಂಪ್ ಗುರುವಾರ ಹೇಳಿದ್ದರು. ಆದರೆ ಉತ್ತರ ಕೊರಿಯಾದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂಬ ಬಗ್ಗೆ ಅವರು ಸ್ಪಷ್ಟ ಉತ್ತರ ನೀಡಿಲ್ಲ. ಉತ್ತರ ಕೊರಿಯಾ ಅಣ್ವಸ್ತ್ರ ಹೊಂದಿರುವ ದೇಶವಾಗಿದ್ದು ಅಣ್ವಸ್ತ್ರ ಸಂಗ್ರಹ ಕೈಬಿಡುವಂತೆ ಮನವರಿಕೆ ಮಾಡಲು ಟ್ರಂಪ್ 2018 ಮತ್ತು 2019ರಲ್ಲಿ ಕಿಮ್ೊಂದಿಗೆ ಶೃಂಗಸಭೆ ನಡೆಸಿದ್ದರು. ಕಿಮ್ೆ ಆರೋಗ್ಯ ಸಮಸ್ಯೆಗಳಿವೆ. ಆದರೆ, ಅದು ಗಂಭೀರವೇ ಎನ್ನುವುದಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಅಮೆರಿಕದ ಬೇಹುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಪತ್ಬಾಂಧವ: ವಿಶ್ವಸಂಸ್ಥೆಯ ದಿಗ್ಬಂಧನದಿಂದಾಗಿ ಸಂಕಷ್ಟಕ್ಕೊಳಗಾಗಿರುವ ಉತ್ತರ ಕೊರಿಯಾಕ್ಕೆ ನೆರೆಯ ಕಮ್ಯೂನಿಸ್ಟ್ ಚೀನಾವೇ ಆಪದ್ಬಾಂಧವ ಮತ್ತು ಉತ್ತರ ಕೊರಿಯಾದ ಆರ್ಥಿಕತೆಯ ಜೀವನಾಡಿಯಾಗಿದೆ. ಕೊರಿಯಾದೊಂದಿಗೆ ದೀರ್ಘ ಗಡಿ ಹೊಂದಿರುವ ಚೀನಾಕ್ಕೆ ಆ ದೇಶದ ಸ್ಥಿರತೆ ವಿಚಾರದಲ್ಲಿ ಬಹಳ ಕಾಳಜಿಯಿದೆ.
ರಹಸ್ಯ ದೇಶ: ಉತ್ತರ ಕೊರಿಯಾ ಜಗತ್ತಿನ ಅತ್ಯಂತ ಪ್ರತ್ಯೇಕಿತ ಹಾಗೂ ರಹಸ್ಯಮಯ ದೇಶಗಳಲ್ಲಿ ಒಂದು. ದೇಶದ ನಾಯಕರ ಆರೋಗ್ಯವನ್ನು ರಾಷ್ಟ್ರೀಯ ಭದ್ರತಾ ವಿಚಾರ ಎಂದು ಪರಿಗಣಿಸಲಾಗುತ್ತದೆ. ಏ.11ರಂದು ಕಿಮ್ ಸಭೆಯೊಂದರ ಅಧ್ಯಕ್ಷತೆ ವಹಿಸಿದ್ದ ಬಗ್ಗೆ ಸರ್ಕಾರಿ ಮಾಧ್ಯಮ ಕೊನೆ ಬಾರಿ ವರದಿ ಮಾಡಿತ್ತು. ಏ. 15ರಂದು ನಡೆದ ತಮ್ಮ ತಾತ ಕಿಮ್ ಇಲ್ ಸಂಗ್ರ ಜನ್ಮ ದಿನದಲ್ಲೂ ಉನ್ ಭಾಗವಹಿಸಿರಲಿಲ್ಲ.
ಹಿಂದೆಯೂ ಹೀಗಾಗಿತ್ತು...: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆಂದು ದಕ್ಷಿಣ ಕೊರಿಯಾದ ಬೇಹುಗಾರಿಕೆ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯ್ಟರ್ಸ್ ಶುಕ್ರವಾರ ವರದಿ ಮಾಡಿದೆ. ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ತಿಳಿಸಿದೆ. 36 ವರ್ಷ ವರ್ಷದ ಕಿಮ್ 2014ರಲ್ಲಿ ಸುಮಾರು ಒಂದು ತಿಂಗಳ ಕಾಲ ಸರ್ಕಾರಿ ಮಾಧ್ಯಮದ ಪ್ರಚಾರದಿಂದ ನಾಪತ್ತೆಯಾಗಿದ್ದರು. ಆನಂತರ ಅವರು ಕುಂಟುತ್ತಾ ನಡೆಯುತ್ತಿದ್ದುದನ್ನು ಸರ್ಕಾರಿ ಟಿವಿ ತೋರಿಸಿತ್ತು.
ಸೋದರಿಯ ಪ್ರಾಮುಖ್ಯ: ಕಿಮ್ ಸೋದರಿ ಕಿಮ್ ಯೋ-ಜೊಂಗ್, ಸೋದರನ ನಂತರ ದೇಶದಲ್ಲಿ ಅತ್ಯಂತ ಹೆಚ್ಚು ಪ್ರಭಾವಿ ನಾಯಕಿ. ಕಿಮ್ ವಿಶ್ವಾಸಾರ್ಹ ವ್ಯಕ್ತಿಯೆಂದರೆ ಈಕೆಯೆ. ಕಿಮ್ ಎಲ್ಲ ಯೋಜನೆಗಳ ಹಿಂದೆ ಯೋ- ಜೊಂಗ್ರ ಮಿದುಳಿದೆ ಎಂದು ಹೇಳಲಾಗುತ್ತಿದೆ. ಕಿಮ್ ಮರಣಿ ಸಿದ್ದಾರೆಂದು ಕೆಲವು ಇಂಟರ್ನೆಟ್ ಮಾಧ್ಯಮಗಳಲ್ಲಿ ವರದಿಯಾದಾಗ, ಕಿಮ್ ಉತ್ತರಾಧಿಕಾರಿ ಆಕೆಯ ಸೋದರಿಯೇ ಎಂದೂ ವರದಿಯಾಗಿತ್ತು.
ಸುಧಾರಣೆ ವರದಿ
* ಕಿಮ್ ಆರೋಗ್ಯ ಸುಧಾರಿಸುತ್ತಿದೆಯೆಂದು ದಕ್ಷಿಣ ಕೊರಿಯಾದ ಸಿಯೋಲ್ ಮೂಲದ ವೆಬ್ಸೈಟ್ ‘ಡೇಲಿ ಎನ್ಕೆ’ ಕಳೆದ ವಾರ ವರದಿ ಮಾಡಿತ್ತು.
* ಸರ್ಜರಿ ನಂತರ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂಬ ವರದಿಗಳನ್ನು ದಕ್ಷಿಣ ಕೊರಿಯಾ ಅಧಿಕಾರಿಗಳು ಮತ್ತು ಚೀನಾ ಕಮ್ಯೂನಿಸ್ಟ್ ಪಕ್ಷದ ಅಧಿಕಾರಿಗಳು ಆಕ್ಷೇಪಿಸಿದ್ದರು.
* ಸಿಗರೇಟ್ ಚಟ ಕಿಮ್ ಆರೋಗ್ಯ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಬೊಜ್ಜು ಬೆಳೆದಿರುವುದು ಕೂಡ ಆತಂಕದ ವಿಚಾರ.