ನ್ಯೂಸ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಸಾವು? ಇನ್ನು ಸಹೋದರಿಯದ್ದೇ ಆಧಿಪತ್ಯ?

ನವದೆಹಲಿ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಆರೋಗ್ಯ ಸಂಪೂರ್ಣ ಬಿಗಡಾಯಿಸಿದ್ದು, ಕೋಮಾದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಿಮ್​ ಕತೆ ಮುಗಿದಿದೆ, ಈಗೇನಿದ್ದರೂ ಆತನ ಸಹೋದರಿ ಅಧಿಕಾರ ಸ್ವೀಕರಿಸುವುದೊಂದೇ ಬಾಕಿ ಎಂದು ಹೇಳಲಾಗುತ್ತಿದೆ.

ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್​ ಡೆ-ಜಂಗ್​ ಆಪ್ತರೊಬ್ಬರು ಹೇಳುವ ಪ್ರಕಾರ, ಈ ಹಿಂದೆಯೂ ಕಿಮ್ ಸಾವಿನ ಸುದ್ದಿಗಳು ಹರಿದಾಡಿದ್ದವು. ಆದರೆ, ಇದಾದ ಕೆಲ ದಿನಗಳಲ್ಲಿಯೇ ಕಿಮ್​ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.

ಕಿಮ್​ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಅವರಿಗೆ ಸ್ಟೆಂಟ್​ ಅಳವಡಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕಿಮ್​ ಜೀವಂತಿಕೆಗೆ ಸಾಕ್ಷ್ಯವೆಂಬಂತೆ ಆಗಲೂ ಕೆಲ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ, ಇದೀಗ ಮತ್ತೆ ಅನಾರೋಗ್ಯದಿಂದ ಬಳಲುತ್ತಿದ್ದ ಕಿಮ್​ ಕೋಮಾಗೆ ಜಾರಿದ್ದಾರೆ. ಈ ಕಾರಣಕ್ಕೆ ಅಧಿಕಾರವನ್ನೆಲ್ಲ ಸಹೋದರಿ ಕಿಮ್​ ಯೊ ಜಂಗ್​ಗೆ ಹಸ್ತಾಂತರಿಸಿದ್ದಾರೆ. ಬಹುತೇಕ ಎಲ್ಲ ನಿರ್ಧಾರಗಳನ್ನು ಆಕೆಯೇ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಉತ್ತರ ಕೊರಿಯಾದ ಆಡಳಿತದಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ಕಿಮ್​ ಜಾಂಗ್​ ಇಲ್​ ಮೃತಪಟ್ಟಾಗ ಹಲವು ತಿಂಗಳ ಬಳಿಕ ಸಾವಿನ ಮಾಹಿತಿಯನ್ನು ನೀಡಲಾಗಿತ್ತು. ಸದ್ಯ ಆತನ ಸಹೋದರಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಉತ್ತರ ಕೊರಿಯಾಗೆ ಭೇಟಿ ನೀಡಿದ್ದ ಪತ್ರಕರ್ತ ರಾಯ್​ ಕೆಲ್ಲಿ ಎಂಬುವರು ಹೇಳಿದ್ದಾರೆ.

ಕಾರ್ಯಭಾರದ ಒತ್ತಡ ನಿಭಾಯಿಸಲಾಗದೇ, ಕಿಮ್​ ಕೆಲ ಅಧಿಕಾರಗಳನ್ನು ಆಯ್ದ ಕೆಲವರಿಗೆ ಹಂಚಿಕೆ ಮಾಡಿದ್ದರು. ಅದರಲ್ಲಿ ಸಹೋದರಿ ಕಿಮ್​ ಯೊ ಜಂಗ್​ ಕೂಡ ಸೇರಿದ್ದಾಳೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಆತನ ಸಾವು ಹಾಗೂ ಸಹೋದರಿ ಅಧಿಕಾರಕ್ಕೆ ಬರುತ್ತಾಳೆ ಎನ್ನುವುದು ಕೂಡ ವದಂತಿಯೇ ಆಗಿದೆ ಎನ್ನುವುದು ಗುಪ್ತಚರ ವಿಭಾಗದ ಕೆಲವರ ಅಭಿಪ್ರಾಯವಾಗಿದೆ.