ನ್ಯೂಸ್

ಕೋಮಾದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್?

rameshmysuru

ಪೊಂಗ್ಯಾಂಗ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆಡಳಿತವನ್ನು ಕಿಮ್ ಸೋದರಿಗೆ ಬಹುತೇಕ ಹಸ್ತಾಂತರ ಮಾಡಲಾಗಿದೆ. ಈಗ ಪ್ರಮುಖ ನಿರ್ಧಾರಗಳನ್ನು ಆಕೆಯೇ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಹಲವು ದಿನಗಳಿಂದ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಅವರು ಮೃತರಾಗಿರುವ ಸಾಧ್ಯತೆ ತೀರಾ ಕಡಿಮೆ ಎಂದು ರಾಜತಾಂತ್ರಿಕ ಅಧಿಕಾರಿ ಚಾಂಗ್ ಸಾಂಗ್ ಮಿಂಗ್ ಹೇಳಿದ್ದಾರೆ.

ಆಡಳಿತದ ಸಂಪೂರ್ಣ ಅಧಿಕಾರ ಕಿಮ್ ಕೈನಲ್ಲಿದೆ. ಆದರೆ ಅವರ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕೆಲ ಜವಾಬ್ದಾರಿಗಳನ್ನು ಸಹೋದರಿಗೆ ವಹಿಸಲಾಗಿದೆ ಎಂದು ನ್ಯಾಷನಲ್ ಇಂಟೆಲಿಜನ್ಸ್ ವಿಂಗ್ ಇತ್ತೀಚೆಗೆ ಹೇಳಿತ್ತು. ಕೆಲ ತಿಂಗಳ ಹಿಂದೆ ಅವರ ಹೃದಯಕ್ಕೆ ಸ್ಟೆಂಟ್ ಅಳವಡಿಕೆ ಮಾಡಲಾಗಿತ್ತು. ಇದಾದ ಬಳಿಕ ಆರೋಗ್ಯ ಬಿಗಡಾಯಿಸಿತ್ತು. ಅವರು ಮೃತಪಟ್ಟಿದ್ದಾರೆ ಎಂಬ ವದಂತಿಯೂ ಹರಿದಾಡಿತ್ತು.