ಕೋಲಾರ: ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಆದೇಶವಿದ್ದರೂ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ಇದರ ಜತೆಗೆ ಸಭೆ, ಸಮಾರಂಭದ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಲ್ಲೇ ಬಾಡೂಟದ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ.
ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೌಕರ ಹರೀಶ್ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕೆಲಸದ ಅವಧಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವುದು ಬಿಟ್ಟು, ಕೇಕ್ ಕತ್ತರಿಸಿಕೊಂಡು ಸಂಭ್ರಮಿಸುತ್ತಿದ್ದಾರೆಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹಿರಿಯ ಉಪನೋಂದಣಾಽಕಾರಿ ಪ್ರಸಾದ್‌ಕುಮಾರ್, ಕಚೇರಿಯ ಕೆಲಸ ಮುಗಿದ ಬಳಿಕವೇ ಆಚರಣೆ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ತಾಲೂಕಿನ ತೊಟ್ಲಿ ಗ್ರಾಪಂ ಕಚೇರಿಯಲ್ಲೂ ಬಾಡೂಟದ ವ್ಯವಸ್ಥೆ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಬುಧವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಮಧ್ಯಾಹ್ನ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ, ಸಿಬ್ಬಂದಿ ವರ್ಗವು ಊಟ ಸವಿದು ಕಚೇರಿ ಎದುರೇ ಪ್ಲೇಟ್ ಬಿಸಾಡಿದ್ದಾರೆ.
ಕೆಲ ಸರ್ಕಾರಿ ಕಚೇರಿಗಳಲ್ಲಿನ ಅಽಕಾರಿಗಳಿಗೆ, ಸಿಬ್ಬಂದಿಗೆ ಹೇಳುವವರು, ಕೇಳುವವರು ಇಲ್ಲವೇ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಗ್ರಾಪಂ ಕಚೇರಿಯಲ್ಲಿ ಬಾಡೂಟ ತಿನ್ನುತ್ತಿರುವುದು ಹಾಗೂ ಪ್ಲೇಟ್‌ಗಳನ್ನು ಕಚೇರಿ ಎದುರು ಬಿಸಾಡಿರುವ ಫೋಟೋಗಳನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಬೀದಿದೀಪ ಅಳವಡಿಸಿ ಎಂದು ಕೇಳುತ್ತಿದ್ದರೂ ಅಳವಡಿಸಲು ಮೀನಮೇಷ ಎಣಿಸುತ್ತಿದ್ದವರಿಗೆ ಭರ್ಜರಿ ಬಾಡೂಟಕ್ಕೆ ಮಾತ್ರ ಹಣ ಎಲ್ಲಿಂದ ಬಂತು? ಕೋಲಾರದಿಂದ ಊಟ ತರಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ, ಇನ್ನಾದರೂ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವುದು ಸಾರ್ವಜನಿಕ ವಲಯದ ಮಾತಾಗಿದೆ.