ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯಲ್ಲಿ ನಡೆದಿದ್ದ ಮದನ್ ಅಲಿಯಾಸ್ ರಿಚಾರ್ಡ್ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣಸವಾಡಿ ನಿವಾಸಿಗಳಾದ ಋತ್ವಿಕ್ ಮತ್ತು ಸುಮನ್ ಬಂಧಿಸಿದ್ದರು. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಈ ನಾಲ್ವರು ಸೇರಿಕೊಂಡು ಅ.11ರಂದು ಬಾಣಸವಾಡಿ ಮುಖ್ಯರಸ್ತೆಯಲ್ಲಿ ಮದನ್ ಎಂಬಾತನನ್ನು ಕೊಲೆ ಮಾಡಿದ್ದರು ಎಂದು ಪಶ್ಚಿಮ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಚಿಕ್ಕಬಾಣಸವಾಡಿಯ ಮದನ್ ಮತ್ತು ಆರೋಪಿಗಳು ಸ್ನೇಹಿತರು. 2019ರಲ್ಲಿ ಮದನ್ ಮತ್ತು ಋತ್ವಿಕ್ ನಡುವೆ ನಡೆದ ಗಲಾಟೆ ನಡೆದಿತ್ತು. ಕೋಪದಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಋತ್ವಿಕ್ ತಲೆಗೆ ಮದನ್ ಹಲ್ಲೆ ನಡೆದಿದ್ದ. ಪರಿಣಾಮ 9 ದಿನಗಳ ಕಾಲ ಆಸ್ಪತ್ರೆಯಲ್ಲಿ ಗಾಯಾಳು ಕೋಮಾ ಸ್ಥಿತಿಯಲ್ಲಿ ಇದ್ದ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಎ್ಐಆರ್ ದಾಖಲಾಗಿ ಮದನ್ ಬಂಧನಕ್ಕೆ ಒಳಗಾಗಿದ್ದ. ಕೋರ್ಟ್‌ನಲ್ಲಿ ಜಾಮೀನು ಪಡೆದ ಮೇಲೆ ಬೆಂಗಳೂರು ತೊರೆದು ಚೆನ್ನೈನಲ್ಲಿ 4 ವರ್ಷಗಳ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಬಾಣಸವಾಡಿಗೆ ವಾಪಸ್ ಆಗಿದ್ದ. ಈ ವಿಷಯ ತಿಳಿದ ಆರೋಪಿಗಳು, ಸೇಡು ತೀರಿಸಿಕೊಳ್ಳಲು ರಾಜೀ ನೆಪದಲ್ಲಿ ಕರೆದಿದ್ದರು.
ಅ.11ರ ಸಂಜೆ ಎಲ್ಲರೂ ಭೇಟಿ ಮಾಡಿ ಮಾತುಕತೆ ಮಾಡುವಾಗ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಮದನ್, ಬೈಕ್‌ನಲ್ಲಿ ಪರಾರಿಯಾಗಿದ್ದ. ಇತ್ತ ಆರೋಪಿಗಳ ಸ್ಕೂಟರ್ ಕೈಕೊಟ್ಟಿತ್ತು. ರಸ್ತೆಯಲ್ಲಿ ಬರುತ್ತಿದ್ದ ಕೊರಿಯರ್ ನೌಕರ ಸುನೀಲ್ ಎಂಬಾತನ ಬೈಕ್ ಕಿತ್ತುಕೊಂಡು ಅದರಲ್ಲಿ ಮದನ್‌ನನ್ನು ಮಾಡಿಕೊಂಡು ಹೋಗುತ್ತಾರೆ.
ಕ್ಷೌರಿಕ ಅಂಗಡಿಯಲ್ಲಿ ಮದನ್ ಇರುವುದನ್ನು ಗಮನಿಸಿ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.