ನ್ಯೂಸ್

ಪತ್ನಿ ಜತೆಗಿನ ಸಲುಗೆ ಪ್ರಶ್ನಿಸಿದಕ್ಕೆ ಕೊಲೆ

ಬೆಂಗಳೂರು: ಪತ್ನಿ ಜತೆ ಸಲುಗೆ ಬೆಳೆಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಖಾಸಗಿ ಶಾಲೆಯ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆಂದ್ರಹಳ್ಳಿ ಮುಖ್ಯರಸ್ತೆಯ ಸಾಯಿಬಾಬಾನಗರದ ಎಚ್.ಎಸ್.ಕಾರ್ತಿಕ್ ಮತ್ತು ಆತನ ಸ್ನೇಹಿತ ಚೇತನ್‌ಕುಮಾರ್ ಬಂಧಿತರು. ಎರಡು ದಿನಗಳ ಹಿಂದೆ ಆಂದ್ರಹಳ್ಳಿಯ ಅವಿನಾಶ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್, ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಮೂಲದ ಯುವತಿಯನ್ನು 2 ವರ್ಷಗಳ ಹಿಂದೆ ಅವಿನಾಶ್ ವಿವಾಹವಾಗಿದ್ದು, ದಂಪತಿಗೆ 9 ತಿಂಗಳ ಮಗುವಿದೆ. ಖಾಸಗಿ ಶಾಲೆಯಲ್ಲಿ ಬಸ್ ಚಾಲಕನಾಗಿದ್ದ ಅವಿನಾಶ್, ತನ್ನ ಕುಟುಂಬದ ಜತೆ ಆಂದ್ರಹಳ್ಳಿ ಸಮೀಪದ ಸಾಯಿಬಾಬಾನಗರದಲ್ಲಿ ವಾಸವಾಗಿದ್ದ.

ಎದುರು ಮನೆಯಲ್ಲಿ ಕಾರ್ತಿಕ್ ವಾಸವಾಗಿದ್ದ. ನೆರೆಹೊರೆಯಲ್ಲಿ ನೆಲೆಸಿದ್ದರಿಂದ ಅವಿನಾಶ್ ಕುಟುಂಬಕ್ಕೆ ಕಾರ್ತಿಕ್ ಪರಿಚಯವಾಗಿದ್ದು, ಆತನ ಪತ್ನಿ ಜತೆ ಕಾರ್ತಿಕ್‌ಗೆ ಸಲುಗೆ ಬೆಳೆಸಿಕೊಂಡಿದ್ದ. ಈ ಸ್ನೇಹದ ವಿಚಾರ ತಿಳಿದು ಅವಿನಾಶ್ ಕೋಪಗೊಂಡಿದ್ದ. ಇದೇ ವಿಷಯವಾಗಿ ಆತ ಪತ್ನಿಗೂ ಬುದ್ಧಿ ಮಾತು ಹೇಳಿದ್ದ. ಈ ನಡುವೆ 50 ಸಾವಿರ ರೂ. ಸಾಲವನ್ನು ಅವಿನಾಶ್‌ನಿಂದ ಕಾರ್ತಿಕ್ ಪಡೆದಿದ್ದ. ತನ್ನ ಪತ್ನಿ ಜತೆ ಸಲುಗೆ ವಿಷಯ ತಿಳಿದ ನಂತರ ಹಣ ಮರಳಿಸುವಂತೆ ಗೆಳೆಯನಿಗೆ ಅವಿನಾಶ್ ತಾಕೀತು ಮಾಡಿದ್ದ.

ಆದರೆ ಈತನ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಅಂತೆಯೇ ಆಂದ್ರಹಳ್ಳಿಯ ಅನುಪಮಾ ಶಾಲೆ ಸಮೀಪ ಗುರುವಾರ ಕಾರ್ತಿಕ್‌ನನ್ನು ಅಡ್ಡಗಟ್ಟಿದ ಅವಿನಾಶ್, ತನ್ನ ಪತ್ನಿ ಸಂಗ ಬಿಡುವಂತೆ ಬೈದಿದ್ದ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕಾರ್ತಿಕ್ ಸಹಾಯಕ್ಕೆ ಬಂದ ಚೇತನ್, ಕೈ ಬಳೆಯಿಂದ ಅವಿನಾಶ್‌ಗೆ ಗುದ್ದಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಕುಸಿದು ಬಿದ್ದಿದ್ದ ಅವಿನಾಶ್‌ನ್ನು ರಕ್ಷಣೆ ಮಾಡಿ ಸಮೀಪದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಚಿಕಿತ್ಸೆ ಲಿಸದೆ ಅವಿನಾಶ್ ಮೃತಪಟ್ಟಿದ್ದಾನೆ. ಮೃತನ ಸಹೋದರ ನೀಡಿದ ದೂರನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.