ನ್ಯೂಸ್

ದೂರು ಕೊಡದಂತೆ ತಡೆಯಲು ಕಿಡ್ನ್ಯಾಪ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದ ಸಂಬಂಧ ಮಾಜಿ ಸಚಿವ ಎಚ್.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ ಸೇರಿ 11 ಮಂದಿ ವಿರುದ್ಧ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಪಟ್ಟಿ ಸಲ್ಲಿಸಿದೆ. ಕೆ.ಆರ್.ನಗರ ಟೌನ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ತನಿಖೆ ಕೈಗೊಂಡ ಎಸ್‌ಐಟಿ ಅಧಿಕಾರಿಗಳು, 11 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಅಂದಾಜು 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತಾರೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ರೇವಣ್ಣ ಮತ್ತು ಭವಾನಿ ಅಣತಿ ಮೇರೆಗೆ ಅಪಹರಣ ನಡೆದಿದೆ. ಏ.23ರಂದು ಸಂತ್ರಸ್ತೆಯನ್ನು ಹೊಳೆನರಸೀಪುರಕ್ಕೆ ಕರೆದು ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗಬಾರದೆಂದು ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಏ.26ರಂದೇ ಸತೀಶ್ ಬಾಬು ಮೂಲಕ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರೆ ಎಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯನ್ನು ಅಪಹರಿಸಿ 7ನೇ ಆರೋಪಿ ಮನೆಯಲ್ಲಿ ಇರಿಸಲಾಗಿತ್ತು. ಆಕೆಗೂ ಆರೋಪಿಗೂ ಯಾವುದೇ ಸಂಬಂಧ ಇರಲಿಲ್ಲ. ಸ್ಥಳದಲ್ಲಿ ಮಹಜರ್ ನಡೆಸಿದಾಗ, ಆಕೆಯ ಕೂದಲು ದೊರೆತಿದೆ. 7ನೇ ಆರೋಪಿ ಈ ಹಿಂದೆ ರೇವಣ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಭವಾನಿ ಅವರು ಕೀರ್ತಿ ಮತ್ತು ಮನು ಜತೆ ಮಾತನಾಡಿದ್ದರು. ಆರೋಪಿಗಳ ಜತೆ ಭವಾನಿ ನಡೆಸಿರುವ ಸಂಭಾಷಣೆಯ 22 ಆಡಿಯೋ ತುಣುಕು ಸಲ್ಲಿಸಲಾಗಿದೆ. ಫೋನ್‌ನಲ್ಲಿಯೇ ಭವಾನಿ ನಿರಂತರವಾಗಿ ಬೆದರಿಕೆ ಹಾಕಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.